ಮಂಗಳೂರು, ಜು. 18 : ಉದ್ಯಮಿ ಮತ್ತು ಶ್ರೀಮಂತ ವ್ಯಕ್ತಿಗಳಿಗೆ ಕೋಟ್ಯಂತರ ರೂ. ವಂಚಿಸಿದ ಆರೋಪಿ ರೋಷನ್ ಸಲ್ಡಾನ ಎಂಬಾತನನ್ನು ಗುರುವಾರ ರಾತ್ರಿ ಮಂಗಳೂರು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಪೊಲೀಸರು ಬಂಧಿಸಿರುವ ಆರೋಪಿ ರೋಶನ್ ಸಲ್ಡಾನ (43) ವಿರುದ್ಧ ಚಿತ್ರದುರ್ಗ ಹಾಗೂ ಮುಂಬೈನಲ್ಲೂ ವಂಚನೆ ಪ್ರಕರಣಗಳು ದಾಖಲಾಗಿದೆ ಎಂದು ಪೊಲೀಸ್ ಆಯುಕ್ತರಾದ ಸುಧೀರ್ ರೆಡ್ಡಿ ಅವರು ತಿಳಿಸಿದ್ದಾರೆ.
ಆರೋಪಿ ರೋಹನ್ ಸಲ್ಡಾನ ಉದ್ಯಮಿಯೆಂದು ಹೇಳಿಕೊಂಡು ಶ್ರೀಮಂತ ವ್ಯಕ್ತಿಗಳನ್ನು ಗುರಿಯಾಗಿಸಿ ದೇಶದ ವಿವಿಧ ಭಾಗಗಳ ಉದ್ದಿಮೆದಾರರಿಗೆ ಸಾಲ ಕೊಡಿಸುವುದಾಗಿ ನಂಬಿಸಿ ಮೋಸ ಮಾಡುತ್ತಿದ್ದ. ಕಳೆದ 3 ತಿಂಗಳಲ್ಲಿ ಆರೋಪಿಯ ವ್ಯವಹಾರ ಪರಿಶೀಲಿಸಿದಾಗ ಇತನು ಗೋವಾ, ಬೆಂಗಳೂರು, ಪುಣೆ, ವಿಜಯಪುರ, ತುಮಕೂರು, ಕಲ್ಕತ್ತಾ, ಸಾಂಗ್ಲಿ, ಲಕ್ನೋ ,ಬಾಗಲಕೋಟೆ ಇತ್ಯಾದಿ ಕಡೆಗಳಲ್ಲಿ ಉದ್ದಿಮೆದಾರರಿಗೆ ಸಾಲ ಕೊಡಿಸುವುದಾಗಿ ನಂಬಿಸಿ ಸುಮಾರು 32 ಕೋಟಿ ರೂ. ಗಳನ್ನುಆರೋಪಿ ಮತ್ತು ಇತರರು ಪಡೆದುಕೊಂಡಿರುವುದು ಕಂಡುಬಂದಿರುತ್ತದೆ. ಉದ್ಯಮಿ ಹಾಗೂ ಶ್ರೀಮಂತ ವ್ಯಕ್ತಿಗಳನ್ನು ತನ್ನ ಮೋಸದ ಬಲೆಗೆ ಬೀಳಿಸುತ್ತಿದ್ದ, ಆರೋಪಿ ತನ್ನ ಜಪ್ಪಿನಮೊಗರುವಿನ ಐಷಾರಾಮಿ ಬಂಗಲೆಗೆ ಕರೆದು ವ್ಯವಹಾರ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ದಾಳಿಯ ಸಮಯದಲ್ಲಿ, ಅಧಿಕಾರಿಗಳು ಇತನ ಮನೆಯಲ್ಲಿ ಇರುವ ಅಪರಾಧ ದಾಖಲೆಗಳು, ಖಾಲಿ ಚೆಕ್‌ಗಳು, 667 ಗ್ರಾಂ ಚಿನ್ನದ ಆಭರಣಗಳು ಮತ್ತು 2.75 ಕೋಟಿ ರೂ. ಮೌಲ್ಯದ ವಜ್ರದ ಉಂಗುರವನ್ನು ವಶಪಡಿಸಿಕೊಂಡಿದ್ದಾರೆ. ಅವರ ನಿವಾಸದಿಂದ 6,72,947 ರೂ. ಮೌಲ್ಯದ ದೇಶಿಯ ಮತ್ತು ವಿದೇಶಿ ಮದ್ಯವನ್ನುವಶಪಡಿಸಿಕೊಂಡಿದ್ದಾರೆ.
ಬಜಾಲ್ ಬಲ್ಲಗುಡ್ಡ ನಿವಾಸಿಯಾದ ಆರೋಪಿ ವಿರುದ್ಧ ಮಂಗಳೂರು ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 22/2025 ಕಲಂ: 316(2), 316(5) 318(2), 318(3) ಜೊತೆಗೆ 3(5) ಭಾರತೀಯ ನ್ಯಾಯ ಸಂಹಿತೆ ಹಾಗೂ ಅಪರಾಧ ಕ್ರಮಾಂಕ:30/2025 ಕಲಂ:316(2), 316(5), 318(2), 318 (3), 61(2) ಜೊತೆಗೆ 3(5) ಭಾರತೀಯ ನ್ಯಾಯ ಸಂಹಿತೆಯಂತೆ ವಂಚನೆ ಪ್ರಕರಣಗಳು ದಾಖಲಾಗಿರುತ್ತದೆ ಎಂದು ಕಮಿಷನರ್ ತಿಳಿಸಿದ್ದಾರೆ.