ಮಂಗಳೂರು ,ಜುಲೈ, 24 :: ಬೋಳೂರಿನ ಮಾತಾ ಅಮೃತಾನಂದಮಯಿ ಮಠದಲ್ಲಿ ಗುರುಪೂರ್ಣಿಮಾ ಆಚರಣೆ ಜು. 27ರಂದು ಅಮೃತೇಶ್ವರಿ ಸಭಾಂಗಣದಲ್ಲಿ ಬೆಳಗ್ಗೆ 7ರಿಂದ ನಡೆಯಲಿದೆ ಎಂದು ಅಮೃತಾನಂದಮಯಿ ಮಠದ ಅಧ್ಯಕ್ಷ ಸುರೇಶ್ ಅಮೀನ್ ಅವರು ಬುಧವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ ಬೋಳೂರಿನಲ್ಲಿರುವ ಶ್ರೀ ಬ್ರಹ್ಮ ಸ್ಥಾನಂ ಕ್ಷೇತ್ರದ ಪ್ರಧಾನ ಅರ್ಚಕರಾದ ಬ್ರಹ್ಮಚಾರಿ ರತೀಶ್, ಅರ್ಚಕ ವೃಂದದವರಿಂದ ಮಹಾಗಣಪತಿ ಹೋಮದೊಂದಿಗೆ ಕಾರ್ಯಕ್ರಮ ಆರಂಭ ಗೊಳ್ಳಲಿದೆ. ಗುರುಹೋಮ, ಮೃತ್ಯುಂಜಯ ಹೋಮ, ಸರ್ವೈಶ್ವರ್ಯ ಸೌಭಾಗ್ಯ ಪೂಜೆಗಳು ಜರಗಲಿದೆ ಎಂದು ಹೇಳಿದರು.
ಮಂಗಳೂರಿನಲ್ಲಿ ಆಶ್ರಮ ಹಾಗೂ ಅಮೃತ ವಿದ್ಯಾಲಯಂ ಶಿಕ್ಷಣಸಂಸ್ಥೆ ಪ್ರಾರಂಭಗೊಂಡು 25 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದ್ದು, ಅವುಗಳ ಉದ್ಘಾಟನಾ ಕಾರ್ಯಕ್ರಮ ಬೆಳಗ್ಗೆ 9 ಕ್ಕೆ ನಡೆಯಲಿದೆ. ಸ್ವಾಮಿನಿ ಮಂಗಳಾಮೃತ ಪ್ರಾಣ ಅವರ ನೇತೃತ್ವದಲ್ಲಿ ಬೆಳಗ್ಗೆ 10ರಿಂದ ಗುರುಪೂರ್ಣಿಮೆ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಮಹಾ ಮಂಗಳಾರತಿ, ಭಕ್ತರಿಂದ ಅಮ್ಮನ ಪಾದುಕೆಗೆ ಕ್ಷೀರಾಭಿಷೇಕ, ಗುರುಪೂರ್ಣಿಮಾ ವಿಶೇಷ ಪ್ರಸಾದ ವಿತರಣೆ ,ಅನ್ನ ಪ್ರಸಾದ ನೆರವೇರಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಡಾ| ವಸಂತ ಕುಮಾರ್ ಪೆರ್ಲ, ಖಜಾಂಚಿ ರಾಮನಾಥ್ ನಾಯಕ್, ಆಡಳಿತಾಧಿಕಾರಿ ದೀಪಾ ಮನೋಜ್ ಉಪಸ್ಥಿತರಿದ್ದರು.