ಮಂಗಳೂರು, ಜು.31: ಒಡಿಯೂರು ಶ್ರೀಗಳ ಜನ್ಮದಿನೋತ್ಸವ -ಗ್ರಾಮೋತ್ಸವ ಪೂರ್ವಭಾವಿಯಾಗಿ 2001ರಿಂದ ನಿರಂತರವಾಗಿ ಸ್ವಚ್ಚತಾ ಕಾರ್ಯ ಕ್ರಮವನ್ನು ನಡೆಸಿಕೊಂಡು ಬರುತ್ತಿದ್ದು, ಈ ಬಾರಿ ಆ.3ರಂದು ‘ಬೃಹತ್ ಸ್ವಚ್ಚತಾ ಅಭಿಯಾನ’ ವನ್ನು ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯ 365 ಸ್ಥಳಗಳಲ್ಲಿ ಏಕಕಾಲದಲ್ಲಿ ವಿವಿಧ ಸಂಘಟನೆಗಳ ಸಹಕಾರ ದೊಂದಿಗೆ ಆಯೋಜಿಸಲಾಗಿದೆ ಎಂದು ಸ್ವಾಗತ ಸಮಿತಿಯ ಅಧ್ಯಕ್ಷ ಸಹಕಾರಿರತ್ನ ಎ.ಸುರೇಶ್ ರೈ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2025ರ ಈ ಬಾರಿಯ ಗ್ರಾಮೋತ್ಸವದ ಪೂರ್ವಭಾವಿಯಾಗಿ ಈಗಾಗಲೇ ವಿವಿಧ ಭಾಗಗಳಲ್ಲಿ ವೈದ್ಯಕೀಯ ಮತ್ತು ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗಿದೆ. ಈ ಬಾರಿ ಗ್ರಾಮೋತ್ಸವದ ಕಾರ್ಯ ಕ್ರಮಗಳು ಆ.8 ರಂದು ಶ್ರೀ ಸಂಸ್ಥಾನಮ್ನಲ್ಲಿ ವಿವಿಧ ಸೇವಾ ಚಟುವಟಿಕೆಗಳೊಂದಿಗೆ ಜರಗಲಿದೆ.ಒಡಿಯೂರು ಶ್ರೀಗುರುದೇವ ದತ್ತ ಸಂಸ್ಥಾನಮ್ ನ ಪರಮ ಪೂಜ್ಯ ಶ್ರೀ ಗುರು ದೇವಾನಂದ ಸ್ವಾಮೀಜಿಯವರ ಜನ್ಮದಿನೋತ್ಸವವನ್ನು ಗ್ರಾಮೋತ್ಸವವಾಗಿ ಗುರುವಂದನೆ-ಸೇವಾ ಸಂಭ್ರಮದೊಂದಿಗೆ ಆಚರಿಸಲಾಗುವುದು ಎಂದು ಸುರೇಶ್ ರೈ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಒಡಿಯೂರು ಶ್ರೀಗಳ ಜನ್ಮದಿನೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಪನೆಯಡ್ಕ ಲಿಂಗಪ್ಪ ಗೌಡ, ಕಾರ್ಯಾಧ್ಯಕ್ಷ ಕೃಷ್ಣ ಶೆಟ್ಟಿ ತಾರೆಮಾರ್, ಸಂಘಟನಾ ಕಾರ್ಯದರ್ಶಿ ಮಾತೇಶ್ ಭಂಡಾರಿ, ಪ್ರಧಾನ ಕಾರ್ಯದರ್ಶಿ ಲೋಕನಾಥ ಜಿ. ಶೆಟ್ಟಿ ತಾಳಿಪ್ಪಾಡಿಗುತ್ತು,ಸಿಎ ರಾಮಮೋಹನ್ ರೈ ಉಪಸ್ಥಿತರಿದ್ದರು.