ಮಂಗಳೂರು, ಜು. 01: ಕುಡ್ಲದಗಿಪ್ಪ ಕುಂದಾಪ್ರದರ್ ವಾಟ್ಸಪ್ ಬಳಗದವರ ಆಶ್ರಯದಲ್ಲಿ ‘ಕುಂದಾಪ್ರ ಕನ್ನಡ ಹಬ್ಬ’ ಆಗಸ್ಟ್. 3ರಂದು ಬೆಳಗ್ಗೆ 9 ರಿಂದ ಸಂಜೆ 7ರ ತನಕ ಮಂಗಳೂರಿನ ಉರ್ವ ಸ್ಟೋರ್ನ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ ಎಂದು ಸಂಚಾಲಕ ಸಂತೋಷ್ ಶೆಟ್ಟಿ ಅವರು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಂದಗನ್ನಡದ ನೆಲದಲ್ಲಿ ಜನಿಸಿ, ವೃತ್ತಿ ನಿಮಿತ್ತ ಮಂಗಳೂರಿಗೆ ಬಂದು ನೆಲೆಸಿ, ತುಳುನಾಡಿನವರೇ ಆಗಿದ್ದರೂ, ತಮ್ಮ ಮೂಲ ನೆಲೆಯ ಭಾಷೆ, ಸಂಸ್ಕೃತಿ ಆಚರಣೆ, ಸಂಪ್ರದಾಯವನ್ನ ಉಳಿಸಿಕೊಂಡು ತಮ್ಮ ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಪ್ರತಿವರ್ಷ ವಿಶ್ವ ಕುಂದಾಪ್ರ ದಿನಾಚರಣೆಯನ್ನು ಆಷಾಢ ಮಾಸದ ಒಂದು ದಿನದಲ್ಲಿ ‘ಕುಂದಾಪ್ರ ಹಬ್ಬ’ ಹೆಸರಿನಲ್ಲಿ ಹಲವು ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.ಕಾರ್ಯಕ್ರಮದ ದಿನ ಬೆಳಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಗ್ರಾಮೀಣ ಕ್ರೀಡಾಕೂಟ ನಡೆಯಲಿದೆ. ಅದರಲ್ಲಿ ಮೂರು ಕಾಲಿನ ಓಟ, ಸೈಕಲ್ ಟೈಯರ್ ಓಟ, ಮಡಲು ನೇಯುವುದು, ಗೇರುಬೀಜದ ಗುರಿ, ರಂಗೋಲಿ, ಹೂವಿನ ಸರ ಮಾಡುವುದು ಹಾಗು ಇನ್ನಿತರ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಗ್ರಾಮೀಣ ಕ್ರೀಡಾ ಕೂಟವನ್ನು, ಡಾ ರವೀಶ್ ತುಂಗ, ಅಧ್ಯಕ್ಷರು, ಮನಸ್ವಿನಿ ತುಂಗ ಫ್ಯಾಮಿಲಿ ಟ್ರಸ್ಟ್ ಮಂಗಳೂರು, ಉದ್ಘಾಟಿಸಲಿದ್ದಾರೆ.ಸಂಜೆ 4 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಲಾ ಶೆಟ್ಟಿ ಬಾರ್ಕೂರು ವಹಿಸಲಿದ್ದಾರೆ.ಕುಂದಾಪುರ ಕನ್ನಡ ಪ್ರತಿಷ್ಠಾನ ರಿ. ಬೆಂಗಳೂರು ಇದರ ಅಧ್ಯಕ್ಷ ಡಾ. ದೀಪಕ್ ಶೆಟ್ಟಿ ಬಾರ್ಕೂರು ದಿಕೂಚಿ ಭಾಷಣ ಮಾಡುವರು. ಮುಖ್ಯ ಅತಿಥಿಗಳಾಗಿ ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ನ ಅಧ್ಯಕ್ಷ ಕಿಶೋರ್ ಕುಮಾರ್ ಬಿ. ನಿವೃತ್ತ ಪ್ರಾಂಶುಪಾಲ ಪ್ರೊ. ಮೊಳಹಳ್ಳಿ ಬಾಲಕೃಷ್ಣ ಶೆಟ್ಟಿ, ಸಿಎ ಎಸ್.ಎಸ್ ನಾಯಕ್ ಸಾಸ್ತಾನ ಭಾಗವಹಿಸಲಿದ್ದಾರೆ.
ಡಾ. ಅಣ್ಣಯ್ಯ ಕುಲಾಲ್, ಸಿಎ ಶಾಂತರಾಮ ಶೆಟ್ಟಿ, ಡಾ.ಅರುಣ್ ಕುಮಾರ್ ಶೆಟ್ಟಿ ಅವರನ್ನು ಸನ್ಮಾನಿಸಲಾಗುವುದು ಎಮದು ಸಂತೋಷ್ ಶೆಟ್ಟಿ ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ಮಾಲಾ ಎಸ್.ಶೆಟ್ಟ, ಗೌರವಾಧ್ಯಕ್ಷ ಜಿ.ಕೆ.ಶೆಟ್ಟಿ, ಕಾರ್ಯದರ್ಶಿ ಲಿಖಿತ ಶೆಟ್ಟಿ, ಕೋಶಾಧಿಕಾರಿ ಶರತ್ ಆಚಾರ್ಯ ಮತ್ತು ಸಂತೋಷ್ ಶೆಟ್ಟಿ ಐರೋಡಿ ಉಪಸ್ಥಿತರಿದ್ದರು.