ಮಂಗಳೂರು, ಜ. 04 : ಧರ್ಮಪ್ರಾಂತ್ಯ ದ ವಾರ್ಷಿಕ ಪವಿತ್ರ ಪರಮ ಪ್ರಸಾದದ ಮೆರವಣಿಗೆಯು ಜ. 7, ಭಾನುವಾರ ನಗರದ ಮಿಲಾಗ್ರಿಸ್ ಚರ್ಚ್ ನಿಂದ ಆರಂಭಗೊಂಡು ರೊಸಾರಿಯೊ ಕೆಥೆಡ್ರಲ್ ಚರ್ಚ್ ತನಕ ನಡೆಯಿತು.
ಕಾರ್ಯಕ್ರಮವು ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರ ಅಧ್ಯಕ್ಷತೆಯಲ್ಲಿ ಮಿಲಾಗ್ರಿಸ್ ಚರ್ಚ್‌ನಲ್ಲಿ ನಡೆದ ಸಾಮೂಹಿಕ ಬಲಿಪೂಜೆಯೊಂದಿಗೆ ಪ್ರಾರಂಭವಾಯಿತು.
ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅವರು ಪ್ರವಚನ ನೀಡುತ್ತಾ, ಪರಮ ಪವಿತ್ರ ಪ್ರಸಾದದಲ್ಲಿ ನಾವು ಜಗತ್ತಿನ ಜ್ಯೋತಿಯಾಗಲು ಶಕ್ತಿಯನ್ನು ಪಡೆಯುತ್ತೇವೆ ಮತ್ತು ನಮ್ಮ ಜೀವನದ ಪ್ರತಿಯೊಂದು ಹಂತದಲ್ಲೂ ಕ್ರಿಸ್ತನ ಪ್ರೀತಿಯನ್ನು ಪ್ರತಿಬಿಂಬಿಸಲು ನಮಗೆ ಪ್ರೇರಣೆ ಸಿಗುತ್ತದೆ ಎಂದು ಹೇಳಿದರು.
ಬಲಿಪೂಜೆಯ ನಂತರ, ಪವಿತ್ರ ಪ್ರಸಾದವನ್ನು ಹೊತ್ತ ಅಲಂಕೃತ ವಾಹನವು ನಗರದ ಹಂಪನಕಟ್ಟೆ, ಕ್ಲಾಕ್ ಟವರ್ ವೃತ್ತ, ಎ.ಬಿ. ಶೆಟ್ಟಿ ವೃತ್ತ ಮತ್ತು ನೆಹರು ವೃತ್ತದ ಮೂಲಕ ಸಾಗಿತು. ಮೆರವಣಿಗೆಯಲ್ಲಿ ಸಾವಿರಾರು ಭಕ್ತಾದಿಗಳು ಪಾಲ್ಗೊಂಡರು,
ರೊಸಾರಿಯೂ ಕೆಥೆಡ್ರಲ್‌ನಲ್ಲಿ ನಡೆದ ಆರಾಧನೆ ಮತ್ತು ಪ್ರಾರ್ಥನಾ ವಿಧಿಯನ್ನು ಬೈಬಲ್ ಆಯೋಗದ ಕಾರ್ಯದರ್ಶಿ ವಂದನೀಯ ಡಾ. ವಿನ್ಸೆಂಟ್ ಸಿಕ್ವೇರಾ ನಡೆಸಿಕೊಟ್ಟರು. ಸಮಾರೋಪ ಕಾರ್ಯಕ್ರಮವನ್ನು ಮಂಗಳ ಜ್ಯೋತಿ ಲಿಟರ್ಜಿಕಲ್ ಸೆಂಟರ್ನ ನಿರ್ದೇಶಕರಾದ ವಂದನೀಯ ಫಾದರ್ ರೋಹಿತ್ ಡಿಕೋಸ್ಟಾ ಅವರು ಸಂಘಟಿಸಿದರು. ಈ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಸಂಘಟಕರು, ಸ್ವಯಂಸೇವಕರು ಮತ್ತು ಭಕ್ತಾದಿಗಳಿಗೆ ಬಿಷಪ್ ಸಲ್ಡಾನ್ಹಾ ಅವರು ಹೃತ್ಪೂರ್ವಕ ಧನ್ಯವಾದ ಸಲ್ಲಿಸಿದರು.











