ಮಂಗಳೂರು, ನ. 29 : ಕೊಂಕಣಿ ಭಾಷೆ, ಕಲೆ ಮತ್ತು ಸಂಸ್ಕೃತಿ ಬೆಳೆಯಬೇಕು. ನಾಟ್ಯ, ನಾಟಕ, ಜನಪದ, ಸಂಗೀತ ಇತ್ಯಾದಿ ಕೊಂಕಣಿ ಸಾದರ ಕಲೆಗಳು ಪ್ರಯೋಗ-ಪ್ರದರ್ಶನಗಳ ಮೂಲಕ ಜನಮಾನಸ ತಲುಪಬೇಕು. ಇವುಗಳ ಮೂಲಕ ಕೊಂಕಣಿ ಉಳಿಯಬೇಕು ಮತ್ತು ಬೆಳೆಯಬೇಕು. ಕೊಂಕಣಿ ಪ್ರತಿಭೆಗಳಿಗೆ ವೇದಿಕೆ ಲಭಿಸಬೇಕು ಎಂಬ ಆಶಯದೊಡನೆ ಮಾಂಡ್ ಸೊಭಾಣ್ ಆರಂಭಿಸಿದ ‘ಮಯ್ಯಾಳಿ ಮಾಂಚಿ’ (ತಿಂಗಳ ವೇದಿಕೆ) ಕಾರ್ಯಕ್ರಮವು 300 ತಿಂಗಳ ಯಶಸ್ವಿ ಪಯಣವನ್ನು ಪೂರ್ಣಗೊಳಿಸಿದೆ. 25 ವರ್ಷಗಳ ನಿರಂತರ ಸಾಂಸ್ಕೃತಿಕ ಸೇವೆಯ ಈ ಮಹತ್ವದ ಮೈಲುಗಲ್ಲಿನ ಸಂಭ್ರಮವಾಗಿ ಡಿಸೆಂಬರ್ 6ರಂದು ಕಲಾಂಗಣದಲ್ಲಿ ‘ದಿ ಗ್ರೇಟ್ ಬಾಯ್ಲಾ ಇಂಟರ್ನ್ಯಾಶನಲ್ ಶೋ’ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಲುವಿ ಪಿಂಟೊ ಅವರು ನಗರದ ಖಾಸಗಿ ಹೊಟೇಲ್ ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದುಬಾಯಿಯ ಪ್ರಖ್ಯಾತ ಗಿಟಾರ್ ಮಾಯೆಸ್ಟ್ರೊ ಆಲ್ವಿನ್ ಫೆರ್ನಾಂಡಿಸ್ ಈ ಸಂಗೀತ ಕಾರ್ಯಕ್ರಮವನ್ನು ನಿರ್ದೇಶಿಸಲಿದ್ದು, ಅಂತರರಾಷ್ಟ್ರೀಯ ಖ್ಯಾತಿಯ ಎಲ್ಲೋ ಬೀಟ್ಸ್ ತಂಡವು ಶ್ರೀಲಂಕಾದಿಂದ ಆಗಮಿಸಲಿದೆ. ಹಳೆಯ ಬಾಯ್ಲಾ ಹಾಡುಗಳು ಮನರಂಜಿಸಲಿದ್ದು, ಇದಕ್ಕಾಗಿಯೇ ರಚಿಸಿದ ಕೆಲ ನೂತನ ಹಾಡುಗಳು ಕೇಳುಗರನ್ನು ಕುಣಿಸುವುದರಲ್ಲಿ ಸಂಶಯವಿಲ್ಲ. ನಾಚ್ ಸೊಭಾಣ್ ಮತ್ತು ಅರ್ಬನ್ ಗ್ರೂವ್ ತಂಡಗಳ ನೃತ್ಯವಿದೆ. ಯುವಜನರು ಮತ್ತು ನೃತ್ಯಾಸಕ್ತರಿಗಾಗಿ ನೃತ್ಯ ವೇದಿಕೆ ಇರಲಿದೆ. ವೆಂಜ್ ಮಾಡೆಲಿಂಗ್ ಅಕಾಡೆಮಿಯ ವಿದ್ಯಾರ್ಥಿಗಳು ಕೊಂಕಣಿ ಸಾಂಪ್ರದಾಯಿಕ ಉಡುಗೆಯ ರೂಪದರ್ಶಿ ನಡಿಗೆ ಹಾಗೂ ನೃತ್ಯ ಪ್ರದರ್ಶಿಸಲಿದ್ದಾರೆ ಎಂದರು.
ಬಾಯ್ಲಾ ಹಾಡುಗಳು ಹಾಗೂ ನೃತ್ಯ ಕೊಂಕಣಿ ಕಲೆಯ ಅಸ್ಮಿತೆ. ಬಾಯ್ಲಾದು ಎಂಬ ಪೋರ್ಚುಗೀಸ್ ಶಬ್ದದಿಂದ ಉತ್ಪತ್ತಿಯಾದ ಬಾಯ್ಲಾ ಶಬ್ದದ ಅರ್ಥ ನರ್ತಿಸು. ದುಲ್ಪದ್, ಪೊಲ್ಕಾ ನೃತ್ಯ ಪ್ರಕಾರಗಳಿಂದ ಉದಿಸಿದ ಬಾಯ್ಲಾವನ್ನು ಮಾಂಡ್ ಸೊಭಾಣ್ ಪ್ರಚುರಪಡಿಸಿತು. ವಿಶ್ವದ ಪ್ರಥಮ ಬಾಯ್ಲಾ ಶೋ, ಬಿಗ್ ಬಾಯ್ಲಾ ಶೋ, ಬಾಯ್ಲಾ ಕಾರ್ನಿವಲ್, ಬಾಯ್ಲಾ ಫೆಸ್ಟಿವಲ್, ಬಾಯ್ಲಾ ಅರೇಬಿಯಾ, ಲಿಯೊ ಬಾಯ್ಲಾ ಶೋ, ಹಾಗೂ ಬಾಯ್ಲಾ ನೃತ್ಯ ಸ್ಪರ್ಧೆಗಳನ್ನು ನಡೆಸಿ ಬಾಯ್ಲಾ ನೃತ್ಯ ಪ್ರಕಾರವನ್ನು ಜನರೆಡೆಗೆ ಒಯ್ದಿತು. ಇಂದು ಯಾವುದೇ ಕೊಂಕಣಿ ಸಂಭ್ರಮಗಳು ಬಾಯ್ಲಾ ನೃತ್ಯವಿಲ್ಲದೆ ಕೊನೆಗಾಣವು. ಬಾಯ್ಲಾ ಪ್ರಕಾರವು ಭಾರತ ಮಾತ್ರವಲ್ಲದೇ ಶ್ರೀಲಂಕಾ, ಮೊರಿಶಸ್, ಲ್ಯಾಟಿನ್ ಅಮೇರಿಕಾ ದೇಶಗಳಲ್ಲಿ ಇದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ನಿರ್ದೇಶಕ ಆಲ್ವಿನ್ ಫೆರ್ನಾಂಡಿಸ್, ರೊಯ್ ಕ್ಯಾಸ್ತೆಲಿನೊ, ಸಂಘಟಕ ಸ್ಮಾನಿ ಆಲ್ಯಾರಿಸ್, ಕಾರ್ಯದರ್ಶಿ ರೊನಾಲ್ಡ್ ಕ್ರಾಸ್ತಾ, ಉಪಾಧ್ಯಕ್ಷ ನವೀನ್ ಲೋಬೊ ಹಾಗೂ ಖಜಾಂಚಿ ಎಲ್ರೋನ್ ರೊಡ್ರಿಗಸ್ ಉಪಸ್ಥಿತರಿದ್ದರು.











