ಬೆಂಗಳೂರು, ಫೆ. 15 : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನ ಫೆ 27ರಂದು ನಡೆಯಲಿದ್ದು ಈ ಸಮ್ಮೇಳದಲ್ಲಿ ಭಾಗವಹಿಸಲಿರುವ ನೌಕರರಿಗೆ 2 ದಿನ ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮತ್ತು ರಾಜ್ಯದ ಎಲ್ಲಾ ಇಲಾಖೆಗಳ ವೃಂದ ಸಂಘಗಳ ವತಿಯಿಂದ ಫೆ 27ರಂದು ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನ ಹಾಗೂ ಪ್ರಜಾಸ್ನೇಹಿ ಕಾರ್ಯಾಗಾರ ನಡೆಯಲಿದ್ದು ಈ ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ.
ಬೆಂಗಳೂರು ನೌಕರರಿಗೆ ಫೆ.27ರಂದು ಒಂದು ದಿನ ರಜೆ ನೀಡಿದರೆ, ಇತರೆ ಬೇರೆ-ಬೇರೆ ಜಿಲ್ಲೆಗಳಿಂದ ಬರುವ ನೌಕರರಿಗೆ 2 ದಿನ ರಜೆ ನೀಡಲಾಗಿದೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಈ ಸಮ್ಮೇಳನದಲ್ಲಿ ಭಾಗವಹಿಸಲು ಇಚ್ಛಿಸುವ ಸರ್ಕಾರಿ ನೌಕರರು ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಬೇಕು. ನಂತರ ಸಮ್ಮೇಳನದಲ್ಲಿ ಭಾಗವಹಿಸಿದ ಬಗ್ಗೆ ಅಧಿಕೃತ ಹಾಜರಾತಿ ಪತ್ರವನ್ನು ಸಂಘದ ಅಧ್ಯಕ್ಷರು ಅಥವಾ ಅವರಿಂದ ನಾಮನಿರ್ದೇಶನ ಹೊಂದಿದ ಅಧಿಕಾರಿಗಳಿಂದ ಪಡೆದು ಒದಗಿಸಬೇಕು.
ಈ ಆಧಾರದ ಮೇಲೆ ಸಂಬಂಧಪಟ್ಟ ಅಧಿಕಾರಿಗಳು, ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡುವಂತೆ ಸೂಚನೆ ನೀಡಲಾಗಿದೆ.