ಮಂಗಳೂರು, ಎ. 12: ಕರ್ನಾಟಕ ಬ್ಯಾರೀಸ್ ಸೋಶಿಯಲ್ ಎಂಡ್ ಕಲ್ಬರಲ್ ಫಾರಂ ವತಿಯಿಂದ ಎ. 18, 19, 20ರಂದು ನಗರದ ಕರಾವಳಿ ಉತ್ಸವ ಮೈದಾನದಲ್ಲಿ ‘ಬ್ಯಾರಿ ಸೌಹಾರ್ದ ಉತ್ಸವ’ವನ್ನು ಆಯೋ ಜಿಸಲಾಗಿದೆ ಎಂದು ಫಾರಂ ಅಧ್ಯಕ್ಷ ಜಿ.ಎ. ಬಾವಾ ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಎ. 18ರಂದು ಸಂಜೆ 4ಕ್ಕೆ ಉತ್ಸವ ಉದ್ಘಾಟನೆಗೊಳ್ಳಲಿದೆ, ಎ.20ರಂದು ಸಂಜೆ 7ಕ್ಕೆ ಸಮಾರೋಪಗೊಳ್ಳಲಿದೆ. ಈ ಮೂರು ದಿನಗಳಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಆಹಾರ ಮೇಳ ನಡೆಯಲಿದೆ ಎಂದು ಹೇಳಿದರು.
ಎ. 19ರಂದು ಬೆಳಗ್ಗೆ 10ಕ್ಕೆ ಕರ್ನಾಟಕ ಸರಕಾರದ ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ರಾಜ್ಯದ ಪ್ರಮುಖ ವಿಶ್ವವಿದ್ಯಾನಿಲಯದ ನೇತೃತ್ವದಲ್ಲಿ ಉದ್ಯೋಗ ಮೇಳ ನಡೆಯಲಿದೆ. ಎ. 20ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಶೈಕ್ಷಣಿಕ ಮೇಳ ನಡೆಯಲಿದೆ, ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ, ಕಾಲೇಜು ಮತ್ತು ಜಾಗತಿಕ ಉದ್ಯೋಗ ಬೇಡಿಕೆ ಇರುವ ಕೋರ್ಸ್ ಗಳ ಮಾಹಿತಿ, ಸ್ಪರ್ಧಾತ್ಮಕ ಪರೀಕ್ಷೆಯ ಮಾರ್ಗದರ್ಶನ ಮತ್ತು ಕೌನ್ಸೆಲಿಂಗ್ಗಳ ದಾಖಲೆ, ನೋಂದಾವಣಿ ಬಗ್ಗೆ ಮಾಹಿತಿ ನೀಡಲಾಗುವುದು. ಅದೇ ದಿನ 11 ಕ್ಕೆ ಉದ್ಯಮ ಮೇಳ ನಡೆಯಲಿದೆ. ಜತೆಗೆ ಉಚಿತ ವೈದ್ಯಕೀಯ ಶಿಬಿರ ತಪಾಸಣ ಶಿಬಿರ, ರಕ್ತದಾನ ಶಿಬಿರ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಪ್ರದೀಪ್ ಡಿ’ಸೋಜಾ, ಫೋರಂ ಸಂಸ್ಥಾಪಕ ಇಕ್ವಾಲ್ ಪರ್ಲಿಯಾ, ಬೆಂಗಳೂರು ಪ್ರೆಸಿಡೆನ್ಸಿ ವಿ.ವಿ. ಉಪಕುಲಪತಿ ಸುಹೈಲ್, ಉದ್ಯೋಗ ಮೇಳದ ಉಸ್ತುವಾರಿ ಅರುಣ್, ಮೀಫ್ ಅಧ್ಯಕ್ಷ ಮೂಸಬ್ಬ, ಕೆಪಿಸಿಸಿ ವಕ್ತಾರೆ ಯು.ಟಿ. ಫರ್ಜಾನಾ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾಕ ಘಟಕ ಅಧ್ಯಕ್ಷ ಶಾಹುಲ್ ಹಮೀದ್, ಷರೀಫ್ ಅಬ್ಬಾಸ್ ವಳಾಲು ಉಪಸ್ಥಿತರಿದ್ದರು.