ಮಂಜೇಶ್ವರ,ಮಾ. 09 : ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಮಾರ್ಚ್, 8 ರಂದು ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿರುವ ಸ್ನೇಹಾಲಯ ಸಭಾಂಗಣದಲ್ಲಿ ಅರ್ಥಪೂರ್ಣ ಮತ್ತು ಉತ್ಸಾಹಭರಿತ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಗಣ್ಯ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿ, ಪರಿಸರ ಜಾಗೃತಿಯನ್ನು ಪ್ರತಿಬಿಂಬಿಸುವಂತೆ ಸಸಿಯನ್ನು ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.ಈ ಕಾರ್ಯಕ್ರಮದಲ್ಲಿ ಗಣ್ಯ ಅತಿಥಿಗಳು, ಟ್ರಸ್ಟಿಗಳು, ಸುತ್ತಮುತ್ತಲಿನ ಮಹಿಳೆಯರು, ಸಿಬ್ಬಂದಿ ಸದಸ್ಯರು ಮತ್ತು ಹಿತೈಷಿಗಳು ಭಾಗವಹಿಸಿದರು.
ವ್ಯಸನಮುಕ್ತಿ ಕೇಂದ್ರದ ವ್ಯವಸ್ಥಾಪಕರಾದ ರಾಕೇಶ್ ಲೋಬೋ ಅವರು ಸ್ವಾಗತ ಭಾಷಣ ಮಾಡಿ ಅಂತರಾಷ್ಟ್ರೀಯ ಮಹಿಳಾ ದಿನದ ಮಹತ್ವವನ್ನು ವಿವರಿಸಿದರು. ಮುಖ್ಯ ಅತಿಥಿಗಳಾದ ಅಜಿತಾ ಕೆ. ಮತ್ತು ಇರ್ಫಾನಾ ಇಕ್ಬಾಲ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು.
ಪ್ರಜ್ಞಾ ಕೌನ್ಸೆಲಿಂಗ್ ಸೆಂಟರ್ನ ಸ್ಥಾಪಕಿ ಮತ್ತು ನಿರ್ದೇಶಕಿ ಪ್ರೊಫೆಸರ್ ಹಿಲ್ಡಾ ರಾಯಪ್ಪನ್ ಅವರಿಗೆ ಸಮಾಲೋಚನೆ ಮತ್ತು ಸಾಮಾಜಿಕ ಸೇವೆಯಲ್ಲಿ ನೀಡಿದ ಕೊಡುಗೆಯನ್ನು ಗೌರವಿಸಿ ವಿಶೇಷ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಅವರು ಮಾನಸಿಕ ಆರೋಗ್ಯದ ಮಹತ್ವವನ್ನು ವಿವರಿಸಿ, ಸ್ನೇಹಾಲಯದ ಸ್ಥಾಪಕರಾದ ಬ್ರೋ. ಜೋಸೆಫ್ ಕ್ರಾಸ್ತಾ ಮತ್ತು ಸಂಸ್ಥೆಯ ಸೇವೆಯನ್ನು ಪ್ರಶಂಸಿಸಿ, ಜೀವನದ ಸವಾಲುಗಳನ್ನು ಎದುರಿಸಲು ಸಹಾನುಭೂತಿ ಮತ್ತು ಮಾನವೀಯತೆಯ ಅಗತ್ಯತೆಯನ್ನು ವಿವರಿಸಿದರು.
ಸ್ನೇಹಾಲಯದ ಕಾರ್ಯದರ್ಶಿ ಮತ್ತು ಟ್ರಸ್ಟಿಯಾದ ಓಲಿವಿಯಾ ಕ್ರಾಸ್ತಾ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ ಸಂಸ್ಥೆಯ ಪುನರ್ವಸತಿ ಕಾರ್ಯಗಳು, ಸಾಮಾಜಿಕ ಸೇವೆಗಳು ಹಾಗೂ ಮಹಿಳಾ ಸಬಲೀಕರಣದ ಮಹತ್ವವನ್ನು ವಿವರಿಸಿದರು.
ಶಿಲ್ಪಾ ಕಿಚನ್ನ ಸ್ಥಾಪಕಿ ಶಿಲ್ಪಾ ರಾಜ್ ಅವರಿಗೆ ಸನ್ಮಾನ ಮಾಡಲಾಯಿತು.ನಂತರ ಸ್ನೇಹಾಲಯದ ಸ್ಥಾಪಕರಾದ ಬ್ರೋ. ಜೋಸೆಫ್ ಕ್ರಾಸ್ತಾ ಅವರು ಫಲಾನುಭವಿಗಳಿಗೆ ಸೀರೆಗಳು ಮತ್ತು ಉಡುಗೊರೆಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಕಾಸರಗೋಡು ವನಿತಾ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿ ತಿ ಅಜಿತಾ ಕೆ., ಕಾಸರಗೋಡು ಜಿಲ್ಲಾ ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿಯ ಅಧ್ಯಕ್ಷೆ ಇರ್ಫಾನಾ ಇಕ್ಬಾಲ್, ಪ್ರಜ್ಞಾ ಕೌನ್ಸೆಲಿಂಗ್ ಸೆಂಟರ್ನ ಸ್ಥಾಪಕಿ ಮತ್ತು ನಿರ್ದೇಶಕಿ ಪ್ರೊಫೆಸರ್ ಹಿಲ್ಡಾ ರಾಯಪ್ಪನ್, ಎಸ್‌ಕೆಡಿಆರ್‌ಡಿಪಿ (ರಿ.) ಮಂಜೇಶ್ವರ ತಾಲೂಕು ಯೋಜನಾ ಅಧಿಕಾರಿ ಶಶಿಕಲಾ ಸುವರ್ಣ, ಟ್ರಸ್ಟಿ ಸರಿತಾ ಕ್ರಾಸ್ತಾ ಉಪಸ್ಥಿತರಿದ್ದರು.
ಕಾರ್ಯಕ್ರಮನ್ನು ಸಂಸ್ಥೆಯ ಇನ್‌ಸ್ಟಿಟ್ಯೂಷನಲ್ ಇನ್‌ಚಾರ್ಜ್ ಲವಿಟಾ ಡಿ’ಸೋಜಾ ಹಾಗೂ ಕ್ಲಿನಿಕಲ್ ವಿಭಾಗದ ಮುಖ್ಯಸ್ಥರಾದ ಕ್ಲಿಂಟ್ ಜೋಸೆಫ್ ಅವರು ನಿರೂಪಿಸಿದರು. ಕೌನ್ಸೆಲರ್ ಜೆಸ್ವಿನ್ ಎನ್. ಡಿ. ಅವರು ವಂದಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಆಟೋಪಾಟಗಳು ನಡೆಯಿತು. ರೆಮೊನಾ ಎವೆಟ್ ಪೆರೈರಾ ಮತ್ತು ಹೋರೈಜನ್ ಡ್ಯಾನ್ಸ್ ಕ್ರೂ ಅವರ ನೃತ್ಯ ಪ್ರದರ್ಶನಗಳು ನಡೆಯಿತು.











