ಮಂಗಳೂರು, ಆ. 23: ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ವತಿಯಿಂದ ಆಯೋಜಿಸಲಾದ 16ನೇ ಆವೃತ್ತಿಯ ಉದ್ಯೋಗ ಮೇಳ ‘ಆಳ್ವಾಸ್ ಪ್ರಗತಿ’ ಯಲ್ಲಿ 2416 ಉದ್ಯೋಗಾಕಾಂಕ್ಷಿಗಳಿಗೆ ಸ್ಥಳದಲ್ಲಿಯೇ ಉದ್ಯೋಗದ ಆಫರ್ ದೊರಕಿದೆ. 6183 ಜನರನ್ನುಮುಂದಿನ ಉದ್ಯೋಗ ಸಂದರ್ಶನಕ್ಕೆಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಟಾನದ ಟ್ರಸ್ಟಿ ವಿವೇಕ್ ಆಳ್ವ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಯೋಗ ಮೇಳದ ಬಗ್ಗೆ ಮಾಹಿತಿ ಹಂಚಿಕೊಂಡ ಅವರು, 332 ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದು, 15,539 ಅಭ್ಯರ್ಥಿಗಳು ಭಾಗವಹಿಸಿದ್ದರು. ಮೇಳದಲ್ಲಿ ಭಾಗವಹಿಸಿದ್ದ 301 ಕಂಪನಿಗಳ ಫಲಿತಾಂಶಗಳನ್ನು ವೆಬ್ಸೈಟ್ (www.alvaspragati.com )ನಲ್ಲಿ ಪ್ರಕಟಿಸಲಾಗಿದೆ. ಉಳಿದ ಕಂಪನಿಗಳ ಹಾಗೂ ಅಭ್ಯರ್ಥಿಗಳ ಫಲಿತಾಂಶಗಳನ್ನು ನೇಮಕಾತಿ ಸಂಸ್ಥೆಗಳಿಂದ ಮಾಹಿತಿ ಲಭ್ಯವಾದಂತೆ ಪ್ರಕಟಿಸಲಾಗುವುದು. ಉದ್ಯೋಗ ಮೇಳದಂದು ಸ್ಥಳದಲ್ಲೇ ನೋಂದಣಿ ಮಾಡಿದಂತಹ ಎಸೆಸೆಲ್ಸಿ, ಪಿಯುಸಿಹಾಗೂ ಐಟಿಐ ಅಭ್ಯರ್ಥಿಗಳ ನೇಮಕಾತಿ ವಿವರಗಳನ್ನು ಆಳ್ವಾಸ್ ತಂಡದಿಂದ ದೂರವಾಣಿ ಕರೆ ಹಾಗೂ ಎಸ್ಎಂಎಸ್ ಮೂಲಕ ನೇರವಾಗಿ ತಲುಪಿಸಲಾಗುತ್ತದೆ ಎಂದು ತಿಳಿಸಿದರು.
ಉತ್ಪಾದನಾ ಕ್ಷೇತ್ರದ 75 ಕಂಪನಿಗಳು ಭಾಗವಹಿಸಿ 523 ಮಂದಿಯನ್ನು ಆಯ್ಕೆ ಮಾಡಿಕೊಂಡಿವೆ. ಐಟಿ-ಐಟಿಇಎಸ್ ಕ್ಷೇತ್ರದಲ್ಲಿ 96 ಹಾಗೂ ಬ್ಯಾಂಕಿಂಗ್, ಹಣಕಾಸು ಮತ್ತು ವಿಮಾ ಕ್ಷೇತ್ರದಲ್ಲಿ 211 ಮಂದಿಗೆ ಸ್ಥಳದಲ್ಲೇ ಉದ್ಯೋಗ ದೊರೆತಿದೆ. ಔಷಧ, ಆರೋಗ್ಯ, ಆತಿಥ್ಯ ಮತ್ತು ಚಿಲ್ಲರೆ ಕ್ಷೇತ್ರಗಳಲ್ಲೂ ನೇಮಕಾತಿ ನಡೆದಿದೆ ಎಂದರು.
ವಿಶೇಷಚೇತನ ಅಭ್ಯರ್ಥಿಗಳಿಗೂ ಉದ್ಯೋಗ ದೊರೆತಿದ್ದು, ಮೇಳದ ಅಭ್ಯರ್ಥಿಗಳ ದತ್ತಾಂಶವನ್ನು ವರ್ಷಪೂರ್ತಿ ಬಳಸಿಕೊಂಡು ಅರ್ಹರಿಗೆ ಸೂಕ್ತ ಉದ್ಯೋಗಾವಕಾಶ ಕಲ್ಪಿಸುವ ಕಾರ್ಯ ಮುಂದುವರಿಸಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪ್ರಾಂಶುಪಾಲ ಡಾ.ಕುರಿಯನ್, ಆಳ್ವಾಸ್ ಪ್ರಗತಿ ಉತ್ಪಾದನಾ ವಲಯದ ಮುಖ್ಯಸ್ಥರಾದ ಡಾ. ಕುಮಾರಸ್ವಾಮಿ, ಉದ್ಯೋಗ ನಿಯೋಜನಾ ವಿಭಾಗದ ಮುಖ್ಯಸ್ಥೆ ಕುಮಾರಿ ರಂಜಿತಾ ಆಚಾರ್ಯ, ಆಳ್ವಾಸ್ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ, ಪಿ.ಆರ್ ಒ. ದಿಶಾ ಶೆಟ್ಟಿ ಉಪಸ್ಥಿತರಿದ್ದರು.











