ಮಂಗಳೂರು, ಸೆ. 05 : ಮುಂಡಾಲ ಮಹಾಸಭಾ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ ಸಮಿತಿ ಪದಗ್ರಹಣ ಸಮಾರಂಭ, ಮುಂಡಾಲ ಸಮುದಾಯದ ಸ್ನೇಹ ಸಂಗಮ ಹಾಗೂ ಸನ್ಮಾನ ಕಾರ್ಯಕ್ರಮವು ಸೆಪ್ಟೆಂಬರ್ 6ರಂದು ರವಿವಾರ ಬೆಳಗ್ಗೆ 11.30ಕ್ಕೆ ನಗರದ ಲಾಲ್ಬಾಗ್ನ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಮುಂಡಾಲ ಮಹಾಸಭಾ ದ.ಕ.ಜಿಲ್ಲಾ ಅಧ್ಯಕ್ಷ ಶಿವಪ್ಪ ನಂತೂರು ಅವರು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಚ್ಚೂರು ಶ್ರೀ ಮಾಲ್ತಿದೇವಿ ದೇವಸ್ಥಾನದ ಧರ್ಮದರ್ಶಿ ಹಾಗೂ ಶ್ರೀ ಮಾಲ್ತಿದೇವಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಗೋಕುಲ್ದಾಸ್ ಬಾರ್ಕೂರು ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದರು.
ಚಿತ್ರದುರ್ಗದ ಶ್ರೀ ಆದಿಜಾಂಬವ ಮಹಾಸಂಸ್ಥಾನ ಮಠದ ಶ್ರೀ ಶ್ರೀ ಷಡಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ನಂತೂರಿನಲ್ಲಿರುವ ಮುಂಡಾಲ ಮಹಾಸಭಾ ಜಿಲ್ಲಾ ಕಚೇರಿಯನ್ನು ಸಂತೋಷ್ ಕುಮಾರ್ ಉದ್ಘಾಟಿಸಲಿದ್ದಾರೆ.ಮುಂಡಾಲ ಮಹಾಸಭಾದ ಗೌರವಾಧ್ಯಕ್ಷ ಟಿ.ಸದಾಶಿವ ಕುಂದರ್ ಹಾಗೂ ವೆಂಕಟೇಶ್ ಅಶೋಕನಗರ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಹರೀಶ್ ಜೆ.ಕೊಲಕಾಡಿ, ಬೆಂಗಳೂರು ಅವರು ಸಂಘಟನೆಯ ಲಾಂಛನವನ್ನು ಅನಾವರಣಗೊಳಿಸಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಮುಂಡಾಲ ಸಮುದಾಯದ ವಧು-ವರರ ಅನ್ವೇಷಣಾ ಮಾಹಿತಿ ಶಿಬಿರ ನಡೆಯಲಿದೆ. ಮಧ್ಯಾಹ್ನದ ಬಳಿಕ ಸಮುದಾಯದ ಕಲಾವಿದರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಪ್ರಚಾರ ಸಮಿತಿ ಅಧ್ಯಕ್ಷ ವಿನೋದ್ ಆಳ್ವ , ಉಪಾದಕ್ಷರು ಹರಿಯಪ್ಪ ಚೆಲ್ಯಾರು , ಪ್ರಮುಖರಾದ ಸದಾಶಿವ, ಸುರೇಶ್, ಶಶಿಕಾಂತ್, ಜನಾರ್ಧನ್ ಮತ್ತಿತರರು ಉಪಸ್ಥಿತರಿದ್ದರು.











