ಮಂಗಳೂರು,ನ. 11 : ಯುವ ಉದ್ಯಮಿ ಪುಕಾಶ್ ಕುಂಪಲ ಅವರು ಚಿತ್ರ ನಿರ್ಮಾಪಕರಾಗಿ ತುಳು-ಕನ್ನಡ ಇಂಡಸ್ಟ್ರಿಗೆ ಎಂಟ್ರಿಯಾಗಲಿದ್ದಾರೆ. ಮಾ ಮಂತ್ರ ವೆಂಚರ್ಸ್ ಮತ್ತು ಪಿ ಕೆ ಪ್ರೊಡಕ್ಷನ್ಸ್ ಅರ್ಪಿಸುವ ತುಳು-ಕನ್ನಡ ಹೊಸ ಚಿತ್ರ ನಿರ್ಮಾಣವಾಗಲಿದೆ ಎಂದು ಹೊಸ ಚಿತ್ರದ ನಿರ್ದೇಶಕಿ ಅಶ್ವಿನಿ ಕೋಟ್ಯಾನ್ ಅವರು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಅವರು,ಪ್ರಾರಂಭವಾಗಲಿರುವ ಹೊಸ ಚಿತ್ರಕ್ಕೆ ಕಥೆಯನ್ನು ರಾಜ್ ಪ್ರಕಾಶ್ ಶೆಟ್ಟಿ, ರಚಿಸಿದ್ದು, ಸಂಭಾಷಣೆಯನ್ನು ಡಿ.ಬಿ.ಸಿ.ಶೇಖರ್ ಬರೆದಿರುತ್ತಾರೆ. ನಿರ್ದೇಶನ ಜವಾಬ್ದಾರಿಯನ್ನು ನಮ್ಮ ಕುಡ್ಲ ತುಳು ಚಿತ್ರದ ನಿರ್ದೇಶಕಿ ಅಶ್ವಿನಿ ಕೋಟ್ಯಾನ್ ವಹಿಸಲಿದ್ದಾರೆ. ಪ್ರಕಾಶ್ ಕುಂಪಲ ಮತ್ತು ಎನ್.ಬಿ.ಶರವಣ ಅವರು ಚಿತ್ರಕ್ಕೆ ಬಂಡವಾಳ ಹೂಡುವರು. ಅನಿಲ್ ಕರ್ಕೇರ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.

ಪ್ರಕಾಶ್ ಕುಂಪಲ ಅವರು ಮಾತನಾಡಿ, ಮಂಗಳೂರು ಮತ್ತು ಉಡುಪಿ ಭಾಗದ ಕಲಾವಿದರು ಹಾಗೂ ತಂತ್ರಜ್ಞರನ್ನು ಆಡಿಷನ್ ಮೂಲಕ ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಚಿತ್ರದ ಕಥೆಯನ್ನು ಬರೆದ ರಾಜ್ ಪ್ರಕಾಶ್ ಶೆಟ್ಟಿ ಅವರು ಮಾತಾಡಿ,ಚಿತ್ರದ ಚಿತ್ರೀಕರಣ ಮಂಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರು 35 ದಿನಗಳ ಕಾಲ ಒಂದೇ ಹಂತದಲ್ಲಿ ನಡೆಯಲಿದೆ.ಸಿನಿಮಾದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು, ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕರೊಂದಿಗೆ ಈಗಾಗಲೇ ಮಾತುಕತೆ ನಡೆಸಲಾಗಿದೆ ಎಂದರು.
ತುಳು ಮತ್ತು ಕನ್ನಡ ಭಾಷೆಗಳಲ್ಲಿ ಏಕಕಾಲದಲ್ಲಿ ಸಿನಿಮಾ ನಿರ್ಮಾಣವಾಗಲಿದ್ದು, ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದೆ. ಹೊಸ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ಉದ್ದೇಶದಿಂದ ಚಿತ್ರತಂಡವು ಕಲಾವಿದರು ಹಾಗೂ ತಾಂತ್ರಿಕ ವರ್ಗದ ಆಯ್ಕೆ ಪ್ರಕ್ರಿಯೆಗೆ ಸಿದ್ಧತೆ ನಡೆಸಿದೆ. ಚಿತ್ರೀಕರಣ ಪೂರ್ಣಗೊಂಡ ಬಳಿಕ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳನ್ನು ಮುಗಿಸಿ, ಮುಂದಿನ ವರ್ಷ ಸಿನಿಮಾ ಬಿಡುಗಡೆ ಮಾಡುವ ಯೋಜನೆಯನ್ನು ಹೊಂದಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ ಪುಕಾಶ್ ಕುಂಪಲ, ಎನ್.ಬಿ.ಶರವಣ, ಸಂಭಾಷಣೆಕಾರ ಡಿ.ಬಿ.ಸಿ. ಶೇಖರ್, ಕಾರ್ಯಕಾರಿ ನಿರ್ಮಾಪಕ ಅನಿಲ್ ಕರ್ಕೇರ, ತುಳು ಚಿತ್ರ ನಿರ್ಮಾಪಕ ಪಮ್ಮಿ ಕೊಡಿಯಾಲ್ ಬೈಲ್ ಉಪಸ್ಥಿತರಿದ್ದರು.











