ಮಂಗಳೂರು, ನ.08 : ‘ವಾದಿರಾಜ ವಾಲಗ ಮಂಡಳಿ’ ಈ ಚಿತ್ರದ ಪೋಸ್ಟರ್ ಹಾಗೂ ಮೋಶನ್ ಪೋಸ್ಟರ್ಗಳನ್ನು ಶನಿವಾರ ನಗರದ ಓಶಿಯನ್ ಪರ್ಲ್ ಹೊಟೇಲ್ನಲ್ಲಿ ಬಿಡುಗಡೆಗೊಳಿಸಲಾಯಿತು.
ಪೋಸ್ಟರನ್ನು ಬಿಡುಗಡೆಗೊಳಿಸಿದ ಎಸಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷರು ಮತ್ತು ಎಂ.ಎನ್.ಆರ್. ಪ್ರೊಡಕ್ಷನ್ ಬ್ಯಾನರಿನಲ್ಲಿ ಚಿತ್ರವನ್ನು ನಿರ್ಮಿಸಿದ ನಿರ್ಮಾಪಕರಾದ ಡಾ.ಎಂ. ಎನ್.ರಾಜೇಂದ್ರ ಕುಮಾರ್ ಅವರು, ‘ವಾದಿರಾಜ ವಾಲಗ ಮಂಡಳಿ’ ಕನ್ನಡ ಚಲನಚಿತ್ರ ಡಿಸೆಂಬರ್ ತಿಂಗಳ ಕೊನೆಯಲ್ಲಿ ರಾಜ್ಯಾದ್ಯಂತ ತೆರೆಕಾಣಲು ಸಿದ್ಧವಾಗಿದೆ. ಈ ಚಿತ್ರದಲ್ಲಿ ಕರಾವಳಿಯ ಕಲಾವಿದರು ನಟಿಸಿದ್ದಾರೆ ಮತ್ತು ಕರಾವಳಿಯ ತಂತ್ರಜ್ಞರು ಈ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಚಿತ್ರದಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಚಿತ್ರದ ನಿರ್ದೇಶಕ ಶಶಿರಾಜ್ ಕಾವೂರು ಅವರು ಮಾತನಾಡಿ, ಬ್ರಹ್ಮಾವರ, ಮಂಗಳೂರು, ಮೂಲ್ಕಿ ಹಾಗೂ ಕಾಸರಗೋಡು ಸೇರಿದಂತೆ ಕರಾವಳಿಯ ವಿವಿಧ ಪ್ರದೇಶಗಳಲ್ಲಿ ಸುಮಾರು 55 ದಿನಗಳ ಕಾಲ ಎರಡು ಹಂತಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಚಿತ್ರದಲ್ಲಿ ಕರಾವಳಿಯ ಕಲಾವಿದರಾದ ನವೀನ್ ಡಿ. ಪಡೀಲ್, ಪ್ರಕಾಶ್ ತುಮಿನಾಡು, ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೊಳ್ಳಾರು, ಮೈಮ್ ರಾಮದಾಸ್, ಗೋಪಿನಾಥ್ ಭಟ್, ಶೋಭರಾಜ್ ಪಾವೂರು ಹಾಗೂ ಲಕ್ಷ್ಮಣ ಮಲ್ಲೂರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅರ್ಜುನ್ ವೇದಾಂತ್ ಮತ್ತು ಅಥರ್ವ ಪ್ರಕಾಶ್ ನಾಯಕ ನಟರಾಗಿ, ತನ್ವಿ ರಾವ್ ಹಾಗೂ ವೇನ್ಯ ರೈ ನಾಯಕಿಯರಾಗಿ ಅಭಿನಯಿಸಿದ್ದಾರೆ ಎಂದರು.
ಛಾಯಾಗ್ರಾಹಕ ಎಸ್. ಚಂದ್ರಶೇಖರನ್ ಅವರು ಛಾಯಾಗ್ರಹಣ ಮಾಡಿದ್ದಾರೆ.ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಸಂಗೀತ ಸಂಯೋಜಿಸಿದ್ದುಸಾಹಸ ನಿರ್ದೇಶನವನ್ನು ಸ್ಟಂಟ್ ಶಿವು ನಿರ್ವಹಿಸಿದ್ದಾರೆ, ವಿನಾಯಕ ಆಚಾರ್ಯ ನೃತ್ಯ ನಿರ್ದೇಶನ ಮಾಡಿದ್ದಾರೆ ಎಂದು ತಿಳಿಸಿದರು.
ಚಿತ್ರದ ಕಥೆ, ಚಿತ್ರಕಥೆ ಹಾಗೂ ನಿರ್ದೇಶನವನ್ನು ನಟ, ನಿರ್ದೇಶಕ ಹಾಗೂ ಸಾಹಿತಿ ಶಶಿರಾಜ್ ಕಾವೂರು ವಹಿಸಿಕೊಂಡಿದ್ದಾರೆ. ಜಯಪ್ರಕಾಶ್ ತುಂಬೆ ಸಹ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ. ಸಂತೋಷ್ ಶೆಟ್ಟಿ ಮತ್ತು ಲಕ್ಷ್ಮಣ ಕುಮಾರ್ ಮಲ್ಲೂರು ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದು, ರಾಜೇಶ್ ಕುಡ್ಲ ಪ್ರೊಡಕ್ಷನ್ ಮ್ಯಾನೇಜರ್ ಆಗಿದ್ದಾರೆ. ದೇವಿ ಚಿತ್ರದ ಪೋಸ್ಟರ್ ವಿನ್ಯಾಸ ಮಾಡಿದ್ದಾರೆ ಎಂದರು.
ಸಮಾರಂಭದಲ್ಲಿ ಸಹ ನಿರ್ಮಾಪಕ ಜಯಪ್ರಕಾಶ್ ತುಂಬೆ, ನಟ ಗೋಪಿನಾಥ್ ಭಟ್, ಲಕ್ಷ್ಮಣ ಮಲ್ಲೂರು, ಸಂತೋಷ್ ಶೆಟ್ಟಿ, ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಸೇರಿದಂತೆ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು.











