ಮಂಗಳೂರು, ಸೆ.08 : ಬಂಟರ ಯಾನೆ ನಾಡವರ ಮಾತೃಸಂಘ, ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಬಂಟರ ಸಂಘಗಳ ಹಾಗೂ ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ 20ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ, ತೆನೆಹಬ್ಬ, ಅಷ್ಟೋತ್ತರ ಸಹಸ್ರ ನಾರಿಕೇಳ, ಮಹಾಗಣಯಾಗವು ಸೆಪ್ಟೆಂಬರ್ 14ರಿಂದ 16ರವರೆಗೆ ಮಂಗಳೂರಿನ ಬಂಟ್ಸ್ ಹಾಸ್ಟೇಲ್ನ ಓಂಕಾರ ನಗರದಲ್ಲಿ ನಡೆಯಲಿದೆ ಎಂದು ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ಅಜಿತ್ ಕುಮಾರ್ ರೈ ಮಾಲಾಡಿ ಅವರು ಬಂಟ್ಸ್ ಹಾಸ್ಟೇಲ್ ನಲ್ಲಿರುವ ಅಮೃತೋತ್ಸವ ಕಟ್ಟಡದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು. ಸೆ.13ರಂದು ಸಂಜೆ 5.00 ಗಂಟೆಗೆ ಶರವು ದೇವಸ್ಥಾನದ ಬಳಿಯಿರುವ ರಾಧಾಕೃಷ್ಣ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಬಳಿಕ ಶ್ರೀ ಸಿದ್ಧಿವಿನಾಯಕ ದೇವರ ವಿಗ್ರಹವನ್ನು ಬಂಟ್ಸ್ ಹಾಸ್ಟೇಲಿನ ಓಂಕಾರ ನಗರಕ್ಕೆ ಬರಮಾಡಿಕೊಳ್ಳುವುದು ಎಂದರು.
ಸೆ.14ರಂದು ಬೆಳಿಗ್ಗೆ 8.00 ಗಂಟೆಗೆ ಮೂರ್ತಿ ಪ್ರತಿಷ್ಠೆ ,9.00 ಗಂಟೆಗೆ ಧ್ವಜಾರೋಹಣ, ಗಣೇಶೋತ್ಸವ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ತೆನೆ ವಿತರಣೆ ಕಾರ್ಯಕ್ರಮ ನಡೆಯಲಿರುವುದು. ಸಂಜೆ 3.00ರಿಂದ ಪಾಂಚಜನ್ಯ ಪ್ರತಿಷ್ಠಾನ ಕುಡ್ಲ ಇದರ ಕಲಾವಿದರಿಂದ ‘ಶ್ರೀ ಮಂಗಳಪುರದ ಮಂಗಳಾಂಬಿಕೆ’ ಪೌರಾಣಿಕ ನೃತ್ಯ ನಾಟಕ ನಡೆಯಲಿರುವುದು. ಸಂಜೆ 5.00 ರಿಂದ 7.00 ರ ತನಕ ಧಾರ್ಮಿಕ ಸಭಾ ಕಾರ್ಯಕ್ರಮ, ಸನ್ಮಾನ ನಡೆಯಲಿರುವುದು.ರಾತ್ರಿ 7.30ರಿಂದ ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ 8.00ರಿಂದ ‘ಬಂಟಕಲಾ ಸಂಗಮ-2026’, ವಿವಿಧ ಬಂಟರ ಸಂಘಗಳಿಂದ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ಜರಗಲಿರುವುದು ಎಂದು ತಿಳಿಸಿದರು.
ಸೆ. 15ರಂದು ಬೆಳಿಗ್ಗೆ 11.30ರಿಂದ ಮೂಡಪ್ಪ ಸೇವೆ, ಮಹಾಪೂಜೆ, ಪ್ರಸಾದ ವಿತರಣೆ ನಡೆದು ಅಷ್ಟೋತ್ತರ ಸಹಸ್ರನಾರಿಕೇಳ ಮಹಾಗಣಯಾಗದ ಯಾಗ ಶಾಲಾ ಪ್ರವೇಶ, ಗಣಪತಿ ಪೂಜೆ, ಪುಣ್ಯಾಹ, ಭೂಶುದ್ಧಿ, ವಾಸ್ತು ರಾಕ್ಷೋಘ್ನ ಹವನ, ಮಹಾಪೀಠದಲ್ಲಿ ಕಲಶ ಸ್ಥಾಪನೆ, ಮಹಾಗಣಯಾಗದ ಸೇವಾರ್ಥಿಗಳಿಂದ ಸಂಕಲ್ಪ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ.ಸಂಜೆ 5.00ರಿಂದ 7.00ರವರೆಗೆ ಧಾರ್ಮಿಕ ಸಭೆ. ಸನ್ಮಾನ ಕಾರ್ಯಕ್ರಮ, ರಾತ್ರಿ 7.30ರಿಂದ ಹೂವಿನ ಪೂಜೆ, ರಂಗಪೂಜೆ, ಮಹಾಪೂಜೆ ನಡೆದು ಪ್ರಸಾದ ವಿತರಣೆ ನಡೆಯುವುದು. 8.00ರಿಂದ ಸ್ವರಲಯ ಸಿಂಪೋನಿ ಕಲಾಶಾಲೆಯ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ ಎಂದರು.
ಸೆ. 16ರಂದು ಬೆಳಿಗ್ಗೆ 8.30ರಿಂದ ಅಷ್ಟೋತ್ತರ ಸಹಸ್ರ ನಾರಿಕೇಳ ಮಹಾಗಣಯಾಗ ಆರಂಭಗೊಂಡು 11.00 ಗಂಟೆಗೆ ಯಾಗದ ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ ನಡೆದು ಮಧ್ಯಾಹ್ನ 12.30ಕ್ಕೆ ಮಹಾ ಅನ್ನಸಂತರ್ಪಣೆ ನಡೆಯಲಿರುವುದು.ಸಂಜೆ 3.30ಕ್ಕೆ ಗಣ್ಯರ ಉಪಸ್ಥಿತಿಯಲ್ಲಿ ವಿಸರ್ಜನ ಪೂರ್ವ ಪೂಜೆ ನಡೆದು ಗಣ್ಯರ ಉಪಸ್ಥಿತಿಯಲ್ಲಿ ಶೋಭಾಯಾತ್ರೆಗೆ ಚಾಲನೆ ನೀಡಲಾಗುವುದು. ಶೋಭಾಯಾತ್ರೆಯು ಓಂಕಾರನಗರದಿಂದ ಜಿಲ್ಲೆಯ ವಿವಿಧ ಭಜನಾ ತಂಡಗಳ ಸೇವೆಯೊಂದಿಗೆ ಬಂಟ್ಸ್ ಹಾಸ್ಟೇಲ್ ಸರ್ಕಲ್, ಪಿ.ವಿ.ಎಸ್ ವೃತ್ತ, ನ್ಯೂಚಿತ್ರಾ ಟಾಕೀಸ್, ರಥಬೀದಿ, ವೆಂಕಟರಮಣ ದೇವಸ್ಥಾನದ ರಸ್ತೆಯಲ್ಲಿ ಸಾಗಿ ಶ್ರೀ ಮಹಾಮ್ಮಾಯಿ ದೇವಸ್ಥಾನದ ಕೆರೆಯಲ್ಲಿ ವಿಸರ್ಜಿಸಲಾಗುವುದು ಎಂದು ತಿಳಿಸಿದರು..
ಪತ್ರಿಕಾ ಗೋಷ್ಠಿಯಲ್ಲಿ ಬಂಟರ ಯಾನೆ ನಾಡವರ ಮಾತೃಸಂಘದ ಉಪಾಧ್ಯಕ್ಷ ಹೇಮನಾಥ ಶೆಟ್ಟಿ ಕಾವು, ಪ್ರಧಾನ ಕಾರ್ಯದರ್ಶಿ ಎಂ. ಕರುಣಾಕರ ಶೆಟ್ಟಿ, ಜೊತೆ ಕಾರ್ಯದರ್ಶಿ ಪದ್ಮನಾಭ ಶೆಟ್ಟಿ ಪುಂಚಮೆ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಜಯಶೀಲ ಅಡ್ಯಂತಾಯ, ಪ್ರಧಾನ ಕಾರ್ಯದರ್ಶಿ ಸದಾಶಿವ ಶೆಟ್ಟಿ ಬಿಜೈ ಹಾಗೂ ರಾಮ್ ಮೋಹನ್ ರೈ ಉಪಸ್ಥಿತರಿದ್ದರು.











