ಕೊಲಂಬೊ : ಶ್ರೀಲಂಕಾದ ಹಂಗಾಮಿ ಅಧ್ಯಕ್ಷರಾಗಿ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಜು 15,ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಸುಪ್ರೀಂಕೋರ್ಟ್ನ ಮುಖ್ಯನ್ಯಾಯಮೂರ್ತಿ ಜಯಂತ ಜಯಸೂರ್ಯ ಪ್ರತಿಜ್ಞಾ ವಿಧಿ ಬೋಧಿಸಿದ್ದಾರೆ. ಇದೇ ವೇಳೆ ಮಾತನಾಡಿದ ರಾನಿಲ್ ಸಿಂಘೆ ಅವರು, ನಾನು ಶಾಂತಿಯುತವಾಗಿ ಪ್ರತಿಭಟಿಸುವವರ ಪರವಾಗಿದ್ದೇನೆ. ಪ್ರತಿಭಟನಕಾರರು ಹಾಗೂ ಗಲಭೆಕೋರರ ನಡುವೆ ವ್ಯತ್ಯಾಸವಿದೆ. ಹೀಗಾಗಿ ಹಿಂಸಾಚಾರ ಹಾಗೂ ವಿಧ್ವಂಸಕ ಕೃತ್ಯಗಳನ್ನು ಹತ್ತಿಕ್ಕುವ ಸಲುವಾಗಿ ಸಶಸ್ತ್ರ ಪಡೆಗಳಿಗೆ ಪೂರ್ಣ ಅಧಿಕಾರ ನೀಡಲಾಗಿದೆ ಎಂದು ಹೇಳಿದ್ದಾರೆ.
ಗೊಟಬಯ ರಾಜಪಕ್ಸೆ ಅವರು ಸಿಂಗಾಪುರಕ್ಕೆ ಪಲಾಯನಗೈದಿದ್ದು, ಅವರು ಸ್ಪೀಕರ್ ಮಹಿಂದಾ ಯಾಪಾ ಅಬೆವರ್ದನ ಅವರಿಗೆ ಇ–ಮೇಲ್ ಮುಖಾಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ಪತ್ರ ಕಳುಹಿಸಿದ್ದರು. ಇನ್ನು ಜುಲೈ 20 ರಂದು ಸಂಸತ್ತಿನಲ್ಲಿ ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದೆ ಎಂದು ಸ್ಪೀಕರ್ ಹೇಳಿದ್ದಾರೆ.