Subscribe to Updates
Get the latest creative news from FooBar about art, design and business.
Author: admin
ಪುತ್ತೂರು, ಮಾ. 06 : ಪೊಲೀಸ್ ಜೀಪ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ, ಬೈಕ್ ಸವಾರ ಮೃತಪಟ್ಟ ಘಟನೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸಂಪ್ಯ ಬಳಿ ಮಾ.೫, ಭಾನುವಾರ ರಾತ್ರಿ ನಡೆದಿದೆ. ಮೃತರನ್ನುಪಾಣಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಣ ನಾಯ್ಕ ಬಿ. (50) ಎಂದು ಗುರುತಿಸಲಾಗಿದೆ. ಪೊಲೀಸ್ ಜೀಪ್ ಸುಳ್ಯ ಕಡೆಯಿಂದ ಪುತ್ತೂರಿಗೆ ಆಗಮಿಸುತ್ತಿದ್ದರೆ, ಬೈಕ್ ಪುತ್ತೂರಿನಿಂದ ಆರ್ಲಪದವು ಕಡೆಗೆ ಸಂಚರಿಸುತ್ತಿದ್ದಾಗ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ, ಮಾ. 04 : ಅನಾರೋಗ್ಯದಿಂದ ಮನನೊಂದು ವಿದ್ಯಾರ್ಥಿನಿಯೊಬ್ಬಳು ಕಾಲೇಜು ಹಾಸ್ಟೆಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳದ ನಿಟ್ಟೆಯಲ್ಲಿ ನಡೆದಿದೆ. ಮೃತರನ್ನು ಕುಂದಾಪುರ ಕರಾವಳಿ ಶಿರೂರು ನಿವಾಸಿ ಶೀಲಾವತಿ ಶೆಡ್ಡಿ ಎಂಬವರ ಮಗಳು ಸೀಮಾ (22) ಎಂದು ಗುರುತಿಸಲಾಗಿದೆ.ಇವರು ಕಾರ್ಕಳದ ನಿಟ್ಟೆ ಕಾಲೇಜಿನ ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದು, ನಿಟ್ಟೆ ಕಾಲೇಜಿನ ಹಾಸ್ಟೆಲ್ ನಲ್ಲಿದ್ದರು. ಸೀಮಾ ಅವರು ನರ ಹಾಗೂ ಚರ್ಮದ ಸಮಸ್ಯೆಯಿಂದ ಬಳಲುತ್ತಿದ್ದು 4-5 ತಿಂಗಳ ಹಿಂದೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಇದೀಗ ಮತ್ತೆ ಅದೇ ಕಾರಣದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು, ಮಾ. 03 : ಕರಾವಳಿಯಲ್ಲಿ ದಿನದಿಂದ ದಿನಕ್ಕೆ ಗರಿಷ್ಠ ಉಷ್ಣಾಂಶ ಏರಿಕೆ ಕಾಣುತ್ತಿದೆ. ಭಾರತೀಯ ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ಮಂಗಳೂರಿನಲ್ಲಿ ಗುರುವಾರ 36.9 ಡಿ. ಸೆ ಗರಿಷ್ಠ ಉಷ್ಣಾಂಶ ದಾಖಲಾಗಿದ್ದು,ಇದು ದೇಶದಲ್ಲಿಯೇ ಅತ್ಯಧಿಕ ಎಂದು ವರದಿಯಾಗಿದೆ. ಅಲ್ಲದೇ ಇದು ವಾಡಿಕೆಗಿಂತ 3 ಡಿ.ಸೆ ಹೆಚ್ಚಳವಾಗಿದೆ. ಇದೇ ವೇಳೆ 23.8 ಡಿ.ಸೆ ಕನಿಷ್ಠ ತಾಪಮಾನ ದಾಖಲಾಗಿದ್ದು, 1 ಡಿ.ಸೆ ಏರಿಕೆಯಾಗಿದೆ
ಕಾಸರಗೋಡು, ಮಾ. 02 : ರೈಲು ಬಡಿದು ಮಂಜೇಶ್ವರ ತಾಲೂಕು ಆಸ್ಪತ್ರೆಯ ಸಿಬ್ಬಂದಿ ಸಾವನ್ನಪ್ಪಿದ ಘಟನೆ ಬುಧವಾರ ಉಪ್ಪಳ ರೈಲ್ವೆ ನಿಲ್ದಾಣದ ಬಳಿ ನಡೆದಿದೆ. ಮೃತ ಮಹಿಳೆಯನ್ನುಮಂಗಲ್ಪಾಡಿಯಲ್ಲಿರುವ ಮಂಜೇಶ್ವರ ತಾಲೂಕು ಆಸ್ಪತ್ರೆ ಲ್ಯಾಬ್ ಟೆಕ್ನಿಷಿಯನ್ ಪಿ. ಐಶ್ವರ್ಯ (27) ಎಂದು ಗುರುತಿಸಲಾಗಿದೆ. ಇವರು ನೀಲೇಶ್ವರ ದೇವನ್ ಆರ್ಟ್ಸ್ ನ ವಿಪಿನ್ ರವರ ಪತ್ನಿಯಾಗಿದ್ದಾರೆ. ಬುಧವಾರ ಸಂಜೆ ಕೆಲಸ ಮುಗಿಸಿ ನೀಲೇಶ್ವರ ದಲ್ಲಿರುವ ಮನೆಗೆ ತೆರಳಲು ಉಪ್ಪಳ ರೈಲು ನಿಲ್ದಾಣದ ಸಮೀಪ ಹಳಿ ದಾಟುತ್ತಿದ್ದಾಗ ರೈಲು ಬಡಿದು ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಮಂಜೇಶ್ವರ ಠಾಣೆಯ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ.
ಅಥೆನ್ಸ್, ಮಾ. 01 : ಎರಡು ರೈಲುಗಳ ನಡುವೆ ಪರಸ್ಪರ ಢಿಕ್ಕಿ ಸಂಭವಿಸಿ 32 ಮಂದಿ ಸಾವನ್ನಪ್ಪಿದ ಘಟನೆ ಗ್ರೀಸ್ ನಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ. ಈ ಘಟನೆಯಲ್ಲಿ 85ಕ್ಕೂ ಅಧಿಕ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಥೆನ್ಸ್ ಉತ್ತರ ನಗರ ಥೆಸಲೋನಿಕಿಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕ ರೈಲು ಮತ್ತು ಮಧ್ಯ ಗ್ರೀಸ್ ನ ಲಾರಿಸ್ಸಾ ನಗರದಿಂದ ಬರುತ್ತಿದ್ದ ಸರಕು ಸಾಗಣೆ ರೈಲುಗಳ ನಡುವೆ ಢಿಕ್ಕಿ ಸಂಭವಿಸಿದೆ. ಅಪಘಾತದಿಂದಾಗಿ ಹಲವು ಬೋಗಿಗಳು ಹಳಿತಪ್ಪಿದ್ದು, ಈ ಪೈಕಿ 3 ಬೋಗಿಗಳಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಪ್ರಯಾಣಿಕ ರೈಲಿನಲ್ಲಿದ್ದ 350 ಮಂದಿ ಪ್ರಯಾಣಿಕರ ಪೈಕಿ 32 ಮಂದಿ ಮೃತಪಟ್ಟಿದ್ದು, 85 ಮಂದಿ ಗಾಯಗೊಂಡಿದ್ದಾರೆ . ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 250 ಮಂದಿಯನ್ನು ಸುರಕ್ಷಿತವಾಗಿ ಹೊರ ತೆಗೆಯಲಾಗಿದೆ ಎನ್ನಲಾಗಿದೆ. ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಲ್ಸಾದ್, ಫೆ. 28 : ಗುಜರಾತ್ನ ವಲ್ಸಾದ್ ಜಿಲ್ಲೆಯ ಫಾರ್ಮಾ ಕಂಪೆನಿಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿ ಇಬ್ಬರು ಸಾವನ್ನಪ್ಪಿದ ಘಟನೆ ಸೋಮವಾರ ರಾತ್ರಿ ನಡೆದಿದೆ. ವಲ್ಸಾದ್ ಜಿಲ್ಲೆಯ ಸರಿಗಾಮ್ ಜಿಐಡಿಸಿ ರಾಸಾಯನಿಕ ವಲಯದಲ್ಲಿರುವ ವ್ಯಾನ್ ಪೆಟ್ರೋಕೆಮ್ ಫಾರ್ಮಾ ಕಂಪನಿಯಲ್ಲಿ ಸ್ಪೋಟ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಸ್ಪೋಟದ ತೀವ್ರತೆಗೆ ಕಟ್ಟಡದ ಒಂದು ಭಾಗ ಕುಸಿದಿದೆ. ಸ್ಪೋಟಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ವಲ್ಸಾಡ್ ಎಸ್ಪಿ ವಿಜಯ್ ಸಿಂಗ್ ಗುರ್ಜರ್ ತಿಳಿಸಿದ್ದಾರೆ.
ಶಿವಮೊಗ್ಗ, ಫೆ 27 : ಶಿವಮೊಗ್ಗ ತಾಲೂಕಿನ ಸೋಗಾನೆಯಲ್ಲಿ 449ಕೋ. ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ಲೋಕಾರ್ಪಣೆಗೊಳಿಸಿದರು. ಬಳಿಕ ಪ್ರಧಾನಿ ಮೋದಿಯವರು ಮಾತಾಡಿ ಇಂದು ಶಿವಮೊಗ್ಗಕ್ಕೆ ವಿಮಾನ ನಿಲ್ದಾಣ ದೊರೆತಿದೆ ಈ ಮೂಲಕ ಶಿವಮೊಗ್ಗದ ಜನರ ಹಲವು ವರ್ಷಗಳ ಬೇಡಿಕೆ ಈಡೇರಿದೆ ಎಂದು ಹೇಳಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವ ಆರಗ ಜ್ಞಾನೇಂದ್ರ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವರಾದ ನಾರಾಯಣಗೌಡ, ಭೈರತಿ ಬಸವರಾಜ್, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮತ್ತಿತ್ತರು ಈ ಸಂದರ್ಭದಲ್ಲಿ ವೇದಿಕೆಯಲ್ಲಿದ್ದರು.
ಹೆಬ್ರಿ, ಫೆ. 26 : ದಿನನಿತ್ಯ ಕುಡಿದು ಬಂದು ತಂದೆಯೊಂದಿಗೆ ಗಲಾಟೆ ಮಾಡುತ್ತಿದ್ದ ಮಗನನ್ನು ತಂದೆ ಕೊಲೆ ಮಾಡಿದ ಘಟನೆ ವರಂಗ ಗ್ರಾಮದ ಮೂಡುಬೆಟ್ಟುವಿನಲ್ಲಿ ನಡೆದಿದೆ. ಸತೀಶ್ ಪೂಜಾರಿ(40) ಕೊಲೆಯಾದ ವ್ಯಕ್ತಿ. ಆರೋಪಿಯನ್ನು ಕುಟ್ಟಿ ಪೂಜಾರಿ ಎಂದು ಗುರುತಿಸಲಾಗಿದೆ. ಸತೀಶ್ ಪೂಜಾರಿ ದಿನನಿತ್ಯ ಕುಡಿದು ಬಂದು ಗಲಾಟೆ ಮಾಡುತ್ತಿದ್ದರು. ಶುಕ್ರವಾರ ರಾತ್ರಿಯು ಸತೀಶ್ ಪೂಜಾರಿ ವಿಪರೀತ ಕುಡಿದು ಬಂದು ತಂದೆ ಕುಟ್ಟಿ ಪೂಜಾರಿ ಮಲಗಿದ್ದ ಕೋಣೆಯ ಬಾಗಿಲಿಗೆ ಕಾಲಿನಿಂದ ಒದ್ದು ಕುಟ್ಟಿ ಪೂಜಾರಿಯವರನ್ನು ಮನೆಯ ಹೊರಗೆ ಅಂಗಳಕ್ಕೆ ಎಳೆದು ತಂದಾಗ ಕೋಪಗೊಂಡ ಕುಟ್ಟಿ ಪೂಜಾರಿಯು ಅಡುಗೆ ಕೋಣೆಯಲ್ಲಿದ್ದ ಒಲೆ ಬೆಂಕಿ ಊದುವ ಕಬ್ಬಿಣದ ಕೊಳವೆಯಿಂದ ಸತೀಶ ಪೂಜಾರಿ ಅವರ ಮೇಲೆ ಹಲ್ಲೆ ಮಾಡಿದ್ದರಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು, ಫೆ. 25 : ನಗರದ ನೂತನ ಪೊಲೀಸ್ ಆಯುಕ್ತರಾಗಿ ಕುಲದೀಪ್ ಕುಮಾರ್ ಜೈನ್ ಅವರು ಫೆ. 24, ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ. ನಿರ್ಗಮನ ಪೊಲೀಸ್ ಆಯುಕ್ತರಾದ ಎನ್. ಶಶಿಕುಮಾರ್ ಅವರು ನೂತನ ಪೊಲೀಸ್ ಆಯುಕ್ತರಾದ ಕುಲದೀಪ್ ಕುಮಾರ್ ಜೈನ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಅಧಿಕಾರ ಸ್ವೀಕರಿಸಿ ಮಾತನಾಡಿದ ಕುಲದೀಪ್ ಕುಮಾರ್ ಜೈನ್, ಭ್ರಷ್ಟಾಚಾರ ಸಹಿಸುವುದಿಲ್ಲ. ಅಧಿಕಾರಿಗಳು ಭ್ರಷ್ಟಾಚಾರಕ್ಕೆ ಅವಕಾಶ ನೀಡಬಾರದು. ಎಲ್ಲಾ ರೀತಿಯ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ
ಪಡುಬಿದ್ರಿ, ಫೆ 24 : ಪತಿಯ ಮಾನಸಿಕ ಹಾಗೂ ದೈಹಿಕ ಹಿಂಸೆಯ ಕಾರಣದಿಂದ ಮನನೊಂದು ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಡುಬಿದ್ರಿಯಲ್ಲಿ ನಡೆದಿದೆ.ಮೃತ ಮಹಿಳೆಯನ್ನು ಮಮತಾ (42) ಎಂದು ಗುರುತಿಸಲಾಗಿದೆ. ಮಮತಾ ತನ್ನ ತಾಯಿ, ಅಣ್ಣ ಹಾಗೂ ಅಕ್ಕ ಭಾರತಿಗೂ ಗಂಡನ ಮನೆಯಲ್ಲಿ ತಾನು ಅನುಭವಿಸುತ್ತಿದ್ದ ಹಿಂಸೆಯ ಬಗ್ಗೆ ದೂರವಾಣಿ ಮೂಲಕ ತಿಳಿಸುತ್ತಿದ್ದಳು ಎನ್ನಲಾಗಿದೆ. ಚಿತ್ರಹಿಂಸೆಯಿಂದಲೇ ತನ್ನ ತಂಗಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆತನ ವಿರುದ್ಧ ಕ್ರಮ ಜರಗಿಸುವಂತೆ ಮಮತಾ ಅವರ ಅಣ್ಣ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪಡುಬಿದ್ರಿ ಪೊಲೀಸರು ಸಂಶಯಾಸ್ಪದ ಸಾವಿನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ರವಾನಿಸಲಾಗಿದೆ