ಮಂಗಳೂರು, ಸೆ.12 : ಅಡಿಕೆ ಹಾಳೆಯಿಂದ ತಯಾರಿಸುವ ತಟ್ಟೆಗಳಲ್ಲಿ ಅಡಿಕೆಗೆ ಸಂಬಂಧಿಸಿದ ಹಾನಿಕಾರಕ ಅಂಶಗಳ ಪ್ರಮಾಣ ಅತ್ಯಂತ ಕಡಿಮೆ ಇದೆ.ಹಲವು ಪ್ರತಿಷ್ಠಿತ ಪ್ರಯೋಗಾಲಯಗಳಲ್ಲಿ ನಡೆಸಿದ ಪರೀಕ್ಷೆಗಳಲ್ಲಿ ಅಡಿಕೆಯಲ್ಲಿರುವ ಅರೆಕೋಲಿನ್ ಪ್ರಮಾಣ ಕಡಿಮೆ ಕಂಡುಬಂದಿದೆ ಎಂದು ‘ಅಗ್ರಿ ಲೀಫ್’ ಸಹ ಸಂಸ್ಥಾಪಕ ಅವಿನಾಶ್ ರಾವ್ ಅವರು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಡಿಕೆ ಹಾಳೆ ತಟ್ಟೆಗಳ ಸುರಕ್ಷತೆ ಕುರಿತು ಹಲವು ಅನುಮಾನಗಳು ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ವಿವಿಧ ಸಂಶೋಧನಾ ಸಂಸ್ಥೆಗಳ ಸಹಯೋಗದಲ್ಲಿ ಅಧ್ಯಯನ ನಡೆಸಲಾಗಿದೆ. ಎನ್ವೈಪಿಎ, ಮಣಿಪಾಲ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆ ಸೇರಿದಂತೆ ವಿವಿಧ ಪ್ರತಿಷ್ಠಿತ ಸಂಸ್ಥೆಗಳ ಸಹಕಾರದೊಂದಿಗೆ ಸುಮಾರು ₹50–60 ಲಕ್ಷ ವೆಚ್ಚದಲ್ಲಿ ಸಂಶೋಧನೆ ನಡೆಸಲಾಗಿದೆ ಎಂದರು.
ಖ್ಯಾತ ವಿಜ್ಞಾನಿ ಹಾಗೂ ಅಡಿಕೆ ಬೆಳೆ ಸಂಶೋಧಕ ಗೋಪಾಲ್ ಮರಾಠೆ ಮಾತನಾಡಿ, ಅಡಿಕೆ ಹಾಳೆಗಳಲ್ಲಿ ಅರೆಕೋಲಿನ್, ಅರೆಕಡೀನ್, ಗುವಾಕೋಲಿನ್ ಸೇರಿದಂತೆ ಸಂಬಂಧಿತ ಅಂಶಗಳ ಪ್ರಮಾಣವನ್ನು ವೈಜ್ಞಾನಿಕವಾಗಿ ಪರೀಕ್ಷಿಸಲಾಗಿದೆ. ಪರೀಕ್ಷೆಗಳಿಂದ ಅಡಿಕೆಯಲ್ಲಿ ಕಂಡುಬರುವ ಪ್ರಮಾಣಕ್ಕೆ ಹೋಲಿಸಿದರೆ ಹಾಳೆಯಲ್ಲಿ ಇವುಗಳ ಪ್ರಮಾಣ ಅತ್ಯಂತ ಕಡಿಮೆ ತಿಳಿದುಬಂದಿದೆ ಎಂದು ಹೇಳಿದರು.
ಅಡಿಕೆ ಹಾಳೆ ತಟ್ಟೆಗಳಲ್ಲಿ ಹಾನಿಕಾರಕ ಅಂಶಗಳ ಕುರಿತು ವೈಜ್ಞಾನಿಕವಾಗಿ ಪರಿಶೀಲನೆ ನಡೆಸಲಾಗಿದ್ದು, ಉತ್ಪಾದನಾ ಪ್ರಕ್ರಿಯೆಯಲ್ಲಿ ಬಳಸುವ ಬೋರ್ಡೋ ಮಿಶ್ರಣ ಸೇರಿದಂತೆ ಇತರ ರಾಸಾಯನಿಕಗಳ ಪರಿಣಾಮವನ್ನು ಪ್ರತ್ಯೇಕವಾಗಿ ಪರಿಗಣಿಸಬೇಕಿದೆ ಎಂದು ತಿಳಿಸಿದರು.
ಗೋಪಾಲ್ ಮರಾಠೆ ಅವರು ಮಾತಾಡಿ, ಅಡಿಕೆ ಹಾಳೆಯ ತ್ಯಾಜ್ಯವನ್ನೂ ಮೌಲ್ಯವರ್ಧಿತ ಉತ್ಪನ್ನಗಳಾಗಿ ಬಳಸುವ ಸಾಧ್ಯತೆಗಳ ಕುರಿತು ಸಂಶೋಧನೆ ನಡೆಯುತ್ತಿದೆ. ಎಥನಾಲ್ ಸೇರಿದಂತೆ ವಿವಿಧ ಉತ್ಪನ್ನಗಳ ತಯಾರಿಕೆ ಹಾಗೂ ಪ್ರಯೋಗಾಲಯಗಳಲ್ಲಿ ಬೆಡ್ಡಿಂಗ್ ವಸ್ತುವಾಗಿ ಬಳಕೆಯ ಸಾಧ್ಯತೆಯನ್ನೂ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.
ಅವಿನಾಶ್ ರಾವ್ ಅವರು ಮಾತಾಡಿ,ಅಡಿಕೆ ಹಾಳೆ ತಟ್ಟೆಗಳ ಉದ್ಯಮದಲ್ಲಿ ಸಣ್ಣ ಉದ್ಯಮಿಗಳು ಹಾಗೂ ಅಡಿಕೆ ಬೆಳೆಗಾರರು ಪರೋಕ್ಷವಾಗಿ ಅವಲಂಬಿತರಾಗಿರುವ ಹಿನ್ನೆಲೆಯಲ್ಲಿ, ನೈಸರ್ಗಿಕ ಉತ್ಪನ್ನದ ಸುರಕ್ಷತೆ ಕುರಿತು ವೈಜ್ಞಾನಿಕ ಅಧ್ಯಯನ ನಡೆಸುವುದು ಅಗತ್ಯವಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಮುಖ್ಯ ಸಂಶೋಧನಾ ಎಂಜಿನಿಯರ್ ಹರ್ಷ ಪಾಟೀಲ್ ಉಪಸ್ಥಿತರಿದ್ದರು.











