Subscribe to Updates
Get the latest creative news from FooBar about art, design and business.
Author: admin
ಕಾಸರಗೋಡು, ಮಾ. 21: ವಿದ್ಯಾರ್ಥಿನಿಯೊಬ್ಬಳು ಮನೆಯ ಕೋಣೆಯಲ್ಲಿ ನಿಗೂಢ ರೀತಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬಂದಡ್ಕದಲ್ಲಿ ನಡೆದಿದೆ. ಮೃತರನ್ನು ಬಂದಡ್ಕ ಮಾಲಕುಂಡ ಇಲ್ಲತಿಂಗಲ್ನ ನಿವಾಸಿ ಕೆ. ವಿ ಶರಣ್ಯ (17) ಎಂದು ಗುರುತಿಸಲಾಗಿದೆ. ಶರಣ್ಯ ಅವರು ಬಂದಡ್ಕ ಸರಕಾರಿ ಹಯರ್ ಸೆಕೆಂಡರಿ ಶಾಲೆಯ ಪ್ಲಸ್ ಟು ವಿದ್ಯಾರ್ಥಿನಿಯಾಗಿದ್ದಳು. ಸೋಮವಾರ ಶರಣ್ಯ ಅವರ ತಾಯಿ ಸುಜಾತಾರವರು ಸಂಜೆ ಕೆಲಸ ಮುಗಿಸಿ ಮನೆಗೆ ಬಂದು ಕಿಟಿಕಿ ಮೂಲಕ ಮನೆಯ ಕೋಣೆಯೊಳಗೆ ಗಮನಿಸಿದಾಗ ಶರಣ್ಯ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ ಎನ್ನಲಾಗಿದೆ. ಈ ಬಗ್ಗೆ ಬೇಡಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಕೆ ನಡೆಸುತ್ತಿದ್ದಾರೆ.
ಮಂಗಳೂರು ಮಾ.20 : ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೆ ಅಂಗವಾಗಿ ಮಾ.15, ಬುಧವಾರ ಮಧ್ಯಾಹ್ನ ರಥಾರೋಹಣ, ರಾತ್ರಿ ರಥೋತ್ಸವ ವಿಜೃಂಭಣೆಯಿಂದ ಜರಗಿತು. ಬುಧವಾರ ಪ್ರಾತಃಕಾಲ ಪೂಜೆ, ಗಣಪತಿ ಹೋಮ, ನವಕ ಕಲಶಾಭಿಷೇಕ, ಮಧ್ಯಾಹ್ನ 12ಗಂಟೆಗೆ ಪೂಜೆ ಯಾಗಿ ರಥಾರೋಹಣ ನಡೆಯಿತು. ಸಂಜೆ 7 ಗಂಟೆಗೆ ರಥೋತ್ಸವ ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ, ಶ್ರೀ ಭೂತಬಲಿ, ಕವಾಟ ಬಂಧನ, ಶಯನ ನಡೆಯಿತು. ಸಂಜೆ 5ರಿಂದ 9ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಮಾ. 16ರಂದು ಕ್ಷೇತ್ರದಲ್ಲಿ ಬೆಳಗ್ಗೆ 6.34ಕ್ಕೆ ಕವಾಟೋ ದ್ಘಾಟನೆ, ಅಭಿಷೇಕ ಪೂಜೆ, ಅಷ್ಟಾವಧಾನ, ತೀರ್ಥಪ್ರಸಾದ, ಬಲಿ, ತುಲಾಭಾರ, ಮಧ್ಯಾಹ್ನ ಮಹಾಪೂಜೆ, ಸಂಜೆ 7 ಗಂಟೆಗೆ ಬಲಿ ಹೊರಟು ಅವಭೃತ ಮಂಗಳ ಸ್ನಾನ, ಧ್ವಜಾವರೋಹಣ ನಡೆಯಿತು. ಶ್ರೀ ಕ್ಷೇತ್ರಕ್ಕೆ ಬೆಳಗ್ಗೆಯಿಂದಲೇ ಊರ- ಪರವೂರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.
ಮುಂಬೈ, ಮಾ. 20 : ಟೆಕ್ ಕಂಪೆನಿಯೊಂದರ ಸಿಇಒ(ಮಹಿಳೆ) ಜಾಗಿಂಗ್ ಮಾಡುತ್ತಿದ್ದ ವೇಳೆ ವೇಗವಾಗಿ ಬಂದ ಕಾರೊಂದು ಢಿಕ್ಕಿ ಹೊಡೆದು ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮುಂಬೈಯ ವರ್ಲಿಯಲ್ಲಿ ಭಾನುವಾರ ನಡೆದಿದೆ. ಮೃತರನ್ನು ರಾಜಲಕ್ಷ್ಮಿ ರಾಮಕೃಷ್ಣನ್ (38) )ಎಂದು ಗುರುತಿಸಲಾಗಿದೆ. ರಾಜಲಕ್ಷ್ಮಿ ಅವರು ಭಾನುವಾರ ಬೆಳಗ್ಗೆ ವರ್ಲಿ ಡೇರಿ ಬಳಿ ಜಾಗಿಂಗ್ ಮಾಡುತ್ತಿದ್ದ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿ ರಾಜಲಕ್ಷ್ಮಿ ಅವರಿಗೆ ಢಿಕ್ಕಿಯಾಗಿದೆ. ಇದರಿಂದ ರಸ್ತೆಗೆ ಬಿದ್ದ ಅವರ ತಲೆಗೆ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಕಾರು ಚಾಲಕನನ್ನು ಬಂಧಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.
ಮಂಗಳೂರು ಮಾ.20 : ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಮಾ. 13, ಸೋಮವಾರ ಶ್ರೀ ದೇವರಿಗೆ ಬ್ರಹ್ಮಕಲಶಾಭಿಷೇಕವು ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು. ಚಿತ್ರಾಪುರ ಮಠದ ಶ್ರೀ ವಿದ್ಯೆಂದ್ರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ, ಕುಡುಪು ವೇIಮೂI ನರಸಿಂಹ ತಂತ್ರಿ, ಕೃಷ್ಣರಾಜ ತಂತ್ರಿ ಅವರ ಮುಂದಾಳತ್ವದಲ್ಲಿ ಪೂಜೆ, ಹೋಮಗಳು ಜರಗಿದವು. ಬೆಳಗ್ಗೆ 10.30ರ ವೃಷಭ ಲಗ್ನದಲ್ಲಿ ದೇವರಿಗೆ 1001 ಕಲಶಗಳ ಅಭಿಷೇಕ ನೆರವೇರಿತು. ಬಳಿಕ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕಾರ್ಯಕ್ರಮದಲ್ಲಿ ಭಾಗಿಯಾದರು. ಜೀರ್ಣೋದ್ದಾರ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ, ಮೊಗವೀರ ಸಮುದಾಯ, ಭಕ್ತ ವರ್ಗದವರು ಭಾಗಿಯಾದರು.
ಶಿರ್ವ, ಮಾ. 18 : ಹೊನ್ನಾವರದಲ್ಲಿ ಕಾರು ಹಾಗೂ ಕಂಟೈನರ್ ನಡುವೆ ಅಪಘಾತ ಸಂಭವಿಸಿ ಬಂಟಕಲ್ಲು ಶ್ರಿ ಮಧ್ವ ವಾದಿರಾಜ ತಾಂತ್ರಿಕ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಹಿರಿಯ ಸಹಾಯಕ ರೊಬ್ಬರು ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ. ಮೃತರನ್ನು ಹಿರಿಯ ಸಹಾಯಕ ಪ್ರಾಧ್ಯಾಪಕ ಅನಂತೇಶ ರಾವ್ (40) ಗುರುತಿಸಲಾಗಿದೆ. ಅನಂತೇಶ ರಾವ್ ಅವರು ಉಡುಪಿಯಿಂದ ಸೋದೆ ಮೂಲ ಮಠಕ್ಕೆ ತೆರಳುತ್ತಿದ್ದ ವೇಳೆ ಅವರ ಕಾರು ಹೊನ್ನಾವರದ ಬಳಿ ಕಂಟೈನರ್ಗೆ ಢಿಕ್ಕಿಯಾಗಿದೆ. ಢಿಕ್ಕಿಯ ರಭಸಕ್ಕೆ ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಕಲ್ಲಡ್ಕ, ಮಾ. 17 : ರೈಲು ಢಿಕ್ಕಿ ಹೊಡೆದು ಯುವಕನೋರ್ವ ಸಾವನ್ನಪ್ಪಿದ ಘಟನೆ ಕಲ್ಲಡ್ಕದಲ್ಲಿ ನಡೆದಿದೆ. ಮೃತಪಟ್ಟ ಯುವಕನನ್ನು ಅರ್ಜುನ್ (28) ಎಂದು ಗುರುತಿಸಲಾಗಿದೆ. ಗೋಳ್ತಮಜಲು ಗ್ರಾಮದ ನೆಟ್ಲ ಸಮೀಪದ ಮಾಣಿಮಜಲು ಎಂಬಲ್ಲಿ ಈ ಘಟನೆ ನಡೆದಿದೆ. ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಉತ್ತರಪ್ರದೇಶ, ಮಾ. 16 : ನಕಲಿ ವೈದ್ಯನೊಬ್ಬ ಎರಡೂವರೆ ವರ್ಷದ ಮಗುವಿಗೆ ಶಸ್ತ್ರಚಿಕಿತ್ಸೆ ನಡೆಸಿದ ನಂತರ ಮಗು ಸಾವನ್ನಪ್ಪಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ತಿಲಕ್ ಸಿಂಗ್ ಎಂಬ ನಕಲಿ ವೈದ್ಯ ಮಗುವಿಗೆ ಸರ್ಜರಿ ನಡೆಸಿದ ಬಳಿಕ ಭಾರೀ ಪ್ರಮಾಣದಲ್ಲಿ ರಕ್ತ ಹರಿದು ಹೋದ ಪರಿಣಾಮ ಮಗು ಸಾವನ್ನಪ್ಪಿದೆ. ಈ ಘಟನೆಗೆ ಸಂಬಂಧಿಸಿದಂತೆ ನಕಲಿ ವೈದ್ಯನ ವಿರುದ್ಧ ಪೋಲಿಸರು ಎಫ್ ಐಆರ್ ದಾಖಲಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಲು ಆದೇಶಿಸಲಾಗಿದೆ ಎಂದು ಮುಖ್ಯ ವೈದ್ಯಾಧಿಕಾರಿ ಉಮೇಶ್ ಚಂದ್ರ ತ್ರಿಪಾಠಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಉಡುಪಿ, ಮಾ. 15: ಗುಜರಿ ಅಂಗಡಿಯ ವಸ್ತುಗಳಿಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ ಘಟನೆ ಉಡುಪಿಯಲ್ಲಿ ಬುಧವಾರ ಮುಂಜಾನೆ ನಡೆದಿದೆ. ಉಡುಪಿಯ ಕಿನ್ನಿ ಮುಲ್ಕಿಯ ಸ್ವಾಗತ ಗೋಪುರ ಸಮೀಪದ ಗುಜರಿ ಅಂಗಡಿಯಲ್ಲಿ ಇರಿಸಿದ್ದ ಪ್ಲಾಸ್ಟಿಕ್ ಮತ್ತು ಇನ್ನಿತರ ಗುಜರಿ ವಸ್ತುಗಳಿಗೆ ಬೆಂಕಿ ತಗುಲಿದ್ದು, ತಡರಾತ್ರಿ ಅಗ್ನಿಶಾಮದಳ ಸಿಬ್ಬಂದಿಗಳು ಹರಸಾಹಸಟ್ಟು ಬೆಂಕಿ ನಂದಿಸಿದ್ದಾರೆ ಎನ್ನಲಾಗಿದೆ.
ಮಂಗಳೂರು, ಮಾ. 15: ಬೋಳೂರು ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಮಾ.2,ಗುರುವಾರದಿಂದ ಮಾ.7,ಮಂಗಳಾವಾರತನಕ ಶ್ರೀ ಮಾರಿಯಮ್ಮ ದೇವರ ವಾರ್ಷಿಕ ಮಹೋತ್ಸವವು ವೈಭವದಿಂದ ನಡೆಯಿತು. ಪ್ರತಿಷ್ಠಾ ವರ್ಧಂತಿ ಮಹೋತ್ಸವ ಸಹಿತ ದೇವರ ವರ್ಷಾವಧಿ ಮಹೋತ್ಸವ ಹಿನ್ನೆಲೆಯಲ್ಲಿ ವಿಶೇಷವಾಗಿ ವೈದಿಕ ಪೂಜೆ ಕಾರ್ಯಗಳು ನಡೆದವು. ಕಲಶ ಪ್ರತಿಷ್ಠೆ, ಪ್ರಧಾನ ಹೋಮ ನಡೆದು ದೇವರಿಗೆ ವಿಶೇಷ ಮಹಾಪೂಜೆ ನಡೆಯಿತು. ವರ್ಷಾವಧಿ ಮಹಾಪೂಜೆಯ ನಿಮಿತ್ತ ದೇವಿಯ ಗರ್ಭಗುಡಿಯ ಮುಂದೆ ಮಣ್ಣಿನ ಮಡಕೆಯಲ್ಲಿ ಹಾಲು ಉಕ್ಕಿಸುವ ವಿಶೇಷ ಸೇವೆ ನಡೆಯಿತು. ವರ್ಷಾವಧಿ ಉತ್ಸವ ದಿನದಂದು ಕಂಚಿಲ್ ಸೇವೆ ಹರಕೆ,ದರ್ಶನ ಬಲಿ, ಶ್ರೀ ದೇವಿಯ ಗರ್ಭ ಗುಡಿ ಪ್ರವೇಶ, ನೈವೇದ್ಯ ಬಲಿ ,ಮಹಾರಾಶಿ ಪೂಜೆ ಹಾಗೂ ವಿಶೇಷ ಸೇವೆಗಳು ನಡೆದವು.
ಮೂಡುಬಿದಿರೆ, ಮಾ. 14 : ಪುರಸಭೆ ವ್ಯಾಪ್ತಿಯ ಜ್ಯೋತಿನಗರ ನಿವಾಸಿ, ಪಿಯುಸಿ ವಿದ್ಯಾರ್ಥಿನಿ ಶಂಕಿತ ಡೆಂಗ್ಯೂ ಜ್ವರದಿಂದ ಸಾವನ್ನಪ್ಪಿದ್ದಾರೆ. ಮೃತ ವಿದ್ಯಾರ್ಥಿನಿ ಯನ್ನು ಆಳ್ವಾಸ್ ಪ.ಪೂ. ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ,ಜ್ಯೋತಿನಗರದ ಮಯ್ಯದ್ದಿ -ರಮ್ಲಾತ್ ದಂಪತಿಯ ದ್ವಿತೀಯ ಪುತ್ರಿ ಮಿಸ್ರಿಯಾ (17) ಎಂದು ಗುರುತಿಸಲಾಗಿದೆ. ಮಿಸ್ರಿಯಾ ಅವರು ಕೆಲವು ದಿನಗಳಿಂದ ವಿಪರೀತ ಜ್ವರದಿಂದ ಬಳಲುತ್ತಿದ್ದು, ಬಿಳಿ ರಕ್ತ ಕಣಗಳ ಕುಸಿತ ಕಂಡುಬಂದಿರುವುದರಿಂದ ಸಾವು ಸಂಭವಿಸಿದೆ ಎನ್ನಲಾಗಿದೆ, ಇದು ಡೆಂಗ್ಯೂ ಪ್ರಕರಣ ಎಂದು ಶಂಕಿಸಲಾಗಿದೆ.