Subscribe to Updates
Get the latest creative news from FooBar about art, design and business.
Author: admin
ಸುಳ್ಯ,ಅ.04 :ನಗರ ಪಂಚಾಯತ್ ವತಿಯಿಂದ ಗಾಂಧಿಚಿಂತನ ವೇದಿಕೆ, ಗಾಂಧಿನಗರದ ಗಾಂಧಿ ಪಾರ್ಕ್ ಗೆಳೆಯರ ಬಳಗದ ಸಹಕಾರದಲ್ಲಿ ಗಾಂಧಿ ಪಾರ್ಕ್ ನ ಗಾಂಧಿ ಕಟ್ಟೆಯಲ್ಲಿ ಗಾಂಧಿ ಪ್ರತಿಮೆಯ ಅನಾವರಣ ಕಾರ್ಯಕ್ರಮ ನಡೆಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಗಾಂಧಿಚಿಂತನ ವೇದಿಕೆಯ ಸಂಚಾಲಕರು ಹಾಗೂ ಲೇಖಕರಾದ ಡಾ. ಸುಂದರ ಕೇನಾಜೆ, ಪೌರಾಣಿಕ ಹಾಗೂ ಚಾರಿತ್ರಿಕ ವ್ಯಕ್ತಿತ್ವದ ಮತ್ತು ನಾಯಕತ್ವದ ಪ್ರತೀಕ ಗಾಂಧೀಜಿ. ಹೊಸ ತಲೆಮಾರು ಗಾಂಧೀಜಿಯವರನ್ನು ಅರಿಯಬೇಕಾದ ಅನಿವಾರ್ಯತೆ ಇದೆ. ಸತ್ಯ ಮತ್ತು ಅಹಿಂಸೆಯನ್ನು ಬಯಸುವವರು ಎಲ್ಲರೂ ಗಾಂಧೀಜಿಯವರನ್ನು ಒಪ್ಪುತ್ತಾರೆ. ಜಗತ್ತು ಅಚ್ಚರಿಯಿಂದ ನೋಡುವಂತೆ ಬದುಕಿದ ಗಾಂಧೀಜಿಯವರ ಆದರ್ಶ ಇಂದಿನ ಪರಿಸ್ಥಿತಿಯಲ್ಲಿ ಅತ್ಯಂತ ಅಗತ್ಯ ಎಂದರು. ಕಾರ್ಯಕ್ರಮದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಅಣ್ಣಾ ವಿನಯಚಂದ್ರ ಮಾತನಾಡಿದರು. ಗಾಂಧಿ ಚಿಂತನ ವೇದಿಕೆಯ ಪ್ರಧಾನ ಸಂಚಾಲಕ ಹರೀಶ್ ಬಂಟ್ವಾಳ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಗಾಂಧಿಚಿಂತನ ವೇದಿಕೆಯ ಸಂಚಾಲಕರಾದ ಚಂದ್ರಶೇಖರ ಪೇರಾಲು, ಶಂಕರ ಪೆರಾಜೆ, ಶರೀಫ್ ಕಂಠಿ, ಕೆ.ಎಸ್.ಉಮ್ಮರ್, ಉನೈಸ್ ಪೆರಾಜೆ, ನೇಶ್ ಮಡಪ್ಪಾಡಿ ಮತ್ತಿತರರು…
ಬೆಳ್ತಂಗಡಿ, ಅ.02 :ಕಾರು ಡಿಕ್ಕಿಯಾಗಿ 4ನೇ ತರಗತಿ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಕೊಕ್ಕಡದ ಮಲ್ಲಿಗೆ ಮಜಲು ಎಂಬಲ್ಲಿ ಮಂಗಳವಾರ ನಡೆದಿದೆ. ಮೃತರನ್ನು ನವಾಫ್ ಇಸ್ಮಾಯಿಲ್ (9) ಎಂದು ಗುರುತಿಸಲಾಗಿದೆ. ನವಾಫ್ ಆತೂರಿನ ಆಯೇಷಾ ಶಾಲೆಯಲ್ಲಿ 4ನೇ ತರಗತಿ ವಿದ್ಯಾರ್ಥಿಯಾಗಿದ್ದ. ಸಂಬಂಧಿಯೊಬ್ಬರು ಅಂಗಳದಲ್ಲಿ ಕಾರನ್ನು ಓಡಿಸುತ್ತಿದ್ದಾಗ ವಾಹನದ ಕ್ಲಚ್ ಜಾಮ್ ಆಗಿದ್ದು ಅದು ನವಾಫ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ತೀವ್ರ ಗಾಯಗೊಂಡ ಬಾಲಕನನ್ನು ತಕ್ಷಣ ಪುತ್ತೂರು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಕುಂದಾಪುರ, ಅ.01 : ಕಾಲೇಜು ಮುಗಿಸಿ ಸ್ನೇಹಿತರೊಂದಿಗೆ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿಗೆ ಹಿಂದಿನಿಂದ ಟಿಪ್ಪರ್ ಢಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ಕೋಟೇಶ್ವರ ಪ್ರಥಮ ದರ್ಜೆ ಕಾಲೇಜು ಸಮೀಪ ಕೋಟೇಶ್ವರ ಹಾಲಾಡಿ ರಸ್ತೆಯ ಕಟ್ಕೇರಿ ಎಂಬಲ್ಲಿ ಮಂಗಳವಾರ ನಡೆದಿದೆ. ಮೃತ ವಿದ್ಯಾರ್ಥಿಯನ್ನು ನಾಗೂರು ನಿವಾಸಿ ಪ್ರಸ್ತುತ ಕೋಟೇಶ್ವರದ ಕಾಳಾವರ ವರದರಾಜ ಶೆಟ್ಟಿ ಸರ್ಕಾರೀ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಬಿಎಸ್ಸಿ ವಿದ್ಯಾರ್ಥಿ ಧನುಷ್ ಎಂದು ಗುರುತಿಸಲಾಗಿದೆ. ಧನುಷ್ ಕಾಲೇಜು ಮುಗಿಸಿ ಕೋಟೇಶ್ವರದತ್ತ ರಸ್ತೆ ಬದಿಯ ಇಂಟರ್ ಲಾಕ್ ಮೇಲೆ ನಡೆದುಕೊಂಡು ಬರುತ್ತಿದ್ದ ವೇಳೆ ಹಿಂದಿನಿಂದ ಬಂದ ಟಿಪ್ಪರ್ ಎದುರಿನಿಂದ ಬರುತ್ತಿದ್ದ ಕಾರನ್ನು ತಪ್ಪಿಸಲು ತೀರಾ ಬಲಬದಿಗೆ ಬಂದು ಧನುಷ್ ಗೆ ಢಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ ಧನುಷ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ . ಕುಂದಾಪುರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಂಗಳೂರು,ಸೆ.30 : ಕುದ್ರೋಳಿಯ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ ನಡೆಯುವ ಮಂಗಳೂರು ದಸರಾ ಅಕ್ಟೋಬರ್ 3 ರಿಂದ 14 ರವರೆಗೆ ನಡೆಯಲಿದೆ ಎಂದು ದೇವಸ್ಥಾನ ಆಡಳಿತ ಸಮಿತಿಯ ಕೋಶಾಧಿಕಾರಿ ಪದ್ಮರಾಜ್ ಆರ್. ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಮಂಗಳೂರು ದಸರಾ ಪ್ರಯುಕ್ತ ಅಕ್ಟೋಬರ್ 6 ರಂದು ಹಾಫ್ ಮ್ಯಾರಥಾನ್ ನಡೆಯಲಿದೆ. 21 ಕಿಮೀ ಹಾಫ್ ಮ್ಯಾರಥಾನ್ ನಡೆಯಲಿದ್ದು, 2000ಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು. ಅಕ್ಟೋಬರ್ 13 ರಂದು ಭವ್ಯ ಮೆರವಣಿಗೆ ನಡೆಯಲಿದ್ದು, ದಸರಾ ಸಂಭ್ರಮದಲ್ಲಿ ಮಂಗಳೂರು ನಗರವು ವಿದ್ಯುತ್ ದೀಪಾಗಳಿಂದ ಕಂಗೊಳಿಸಲಿದೆ. ಮಂಗಳೂರು ದಸರಾದಲ್ಲಿ ಹಲವು ಗಣ್ಯರು ಆಗಮಿಸುವ ನಿರೀಕ್ಷೆ ಇದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಜನಾರ್ದನ ಪೂಜಾರಿ, ದೇವಸ್ಥಾನದ ಕಾರ್ಯದರ್ಶಿ ಮಾಧವ ಸುವರ್ಣ, ಟ್ರಸ್ಟಿಗಳಾದ ರವಿಶಂಕರ್ ಮಿಜಾರು, ಎಂ. ಶೇಖರ್ ಪೂಜಾರಿ, ಜಗದೀಪ್ ಡಿ. ಸುವರ್ಣ, ಉಪಾಧ್ಯಕ್ಷರಾದ ಬಿ.ಜಿ. ಸುವರ್ಣ, ದೇವಳ ಅಭಿವೃದ್ಧಿ ಸಮಿತಿ…
ಮಂಗಳೂರು, ಸೆ.30: ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿ ಅವರ 71 ನೇ ಜನ್ಮದಿನಾಚರಣೆಯು ಮಂಗಳೂರಿನ ಸಂಘನಿಕೇತನದಲ್ಲಿ ಭಾನುವಾರ ನಡೆಯಿತು. ಶ್ರೀ ಮಾತಾ ಅಮೃತಾನಂದಮಯಿ ಮಠ ಮಂಗಳೂರು ಇದರ ಮಠಾಧಿಪತಿ ಸಂಪೂಜ್ಯ ಸ್ವಾಮಿನಿ ಮಂಗಳಾಮೃತ ಪ್ರಾಣ ಅವರು ಶ್ರೀ ಗುರು ಪಾದುಕಾಪೂಜೆ ಮಾಡುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಅವರು, ಮಗುವಿಗೆ ಅಮ್ಮನ ಗರ್ಭದಲ್ಲಿ ಇರುವಾಗಲೇ ಬೇಕಾದ ಪೋಷಕಾಂಶಗಳು ಆ ತಾಯಿಯಿಂದಲೇ ಲಭಿಸುತ್ತದೆ. ಶರೀರ ಮತ್ತು ಮನಸ್ಸುಗಳ ಸೃಷ್ಟಿ ಅಲ್ಲಿಂದಲೇ ಆಗುತ್ತದೆ. ಅದೇ ರೀತಿಯಲ್ಲಿ ನಾವು ವಿಶ್ವ ಮಾತೆಯ ಆಶ್ರಯದಲ್ಲಿದ್ದೇವೆ. ಮಗು ತಾಯಿಯ ಪ್ರೇಮವನ್ನು ಅನುಭವಿಸುತ್ತದೆ. ಗರ್ಭದಿಂದ ಹೊರಬಂದ ಮೇಲೆ ತಾಯಿ ಮಗುವಿನ ಮುಖಾಮುಖಿ ಆಗುತ್ತದೆ. ಅಮ್ಮನ ಕರುಣೆ, ದಯೆ ನಮಗೆ ಸದಾ ಇರಲಿದೆ ಎಂದರು. ಅದಾನಿ ಸಮೂಹ ಸಂಸ್ಥೆಗಳ ಅಧ್ಯಕ್ಷ – ಕಿಶೋರ್ ಆಳ್ವ ಮಾತನಾಡಿ, ವಿಶ್ವ ಹೃದಯ ದಿನದ ಸಂದರ್ಭದಲ್ಲಿ ಇಂದು ಅಮ್ಮನ ಜನ್ಮದಿನಾಚರಣೆ ಮಾಡುತ್ತಿರುವುದು ಅರ್ಥ ಪೂರ್ಣ. ಪ್ರೇಮ ಮತ್ತು ಕರುಣೆ…
ಕಠ್ಮಂಡು, ಸೆ. 30 : ನೇಪಾಳದಲ್ಲಿ ನಿರಂತರ ಮಳೆಯಿಂದ ಪ್ರವಾಹ ಮತ್ತು ಭೂಕುಸಿತ ಉಂಟಾಗಿದೆ. ಇದರ ಪರಿಣಾಮ ನೇಪಾಳದಲ್ಲಿ 112 ಜನರು ಸಾವನ್ನಪ್ಪಿದ್ದಾರೆ. ಹಾಗೂ 79 ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಶನಿವಾರ ಹೆಲಿಕಾಪ್ಟರ್ಗಳು ಮತ್ತು ಮೋಟಾರ್ಬೋಟ್ಗಳೊಂದಿಗೆ 3,000 ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ರಕ್ಷಣಾ ಕಾರ್ಯಗಳನ್ನು ಮಾಡಿ ಅನೇಕರನ್ನು ರಕ್ಷಿಸಿದ್ದಾರೆ. ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗಿದೆ. ನಿರಾಶ್ರಿತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ನೇಪಾಳ ಸರ್ಕಾರ ಸೂಚನೆ ನೀಡಿದೆ. ನೇಪಾಳದಲ್ಲಿ ಪ್ರವಾಹ ಮತ್ತು ಭೂಕುಸಿತದ ಪರಿಣಾಮ ಕಾಣೆಯಾದ ಜನರನ್ನು ರಕ್ಷಿಸಲು ಮತ್ತು ಹುಡುಕಲು ಪೊಲೀಸರು ಇತರ ಏಜೆನ್ಸಿಗಳು ಮತ್ತು ಸ್ಥಳೀಯರೊಂದಿಗೆ ಕಾರ್ಯಾಚರಣೆ ನಡೆಸುತ್ತಿವೆ. ಎಂದು ನೇಪಾಳದ ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಪ್ರಾಧಿಕಾರದ ವಕ್ತಾರ ಬಸಂತ ಅವರು ತಿಳಿಸಿದ್ದಾರೆ.
ಬೆಂಗಳೂರು, ಸೆ.29 : ಚುನಾವಣಾ ಬಾಂಡ್ ಮೂಲಕ ಕೋಟ್ಯಂತರ ರೂಪಾಯಿ ಹಣ ಸುಲಿಗೆ ಮಾಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ , ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಹಲವರ ವಿರುದ್ಧ ಶನಿವಾರ ಬೆಂಗಳೂರಿನ ತಿಲಕನಗರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ನಿರ್ಮಲಾ ಸೀತಾರಾಮನ್, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಹಲವರು ಚುನಾವಣಾ ಬಾಂಡ್ ಮೂಲಕ ಕೋಟ್ಯಂತರ ರೂ. ಹಣ ಸುಲಿಗೆ ಮಾಡಿದ್ದಾರೆಂದು ಆರೋಪಿಸಿ ಆದರ್ಶ್ ಐಯ್ಯರ್ ಅವರು ದೂರು ನೀಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಎಫ್ಐಆರ್ ದಾಖಲಿಸಲು ಆದೇಶ ಹೊರಡಿಸಿತ್ತು. ಈ ಆದೇಶದ ಬೆನ್ನಲ್ಲೇ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಒಟ್ಟು ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇದರಲ್ಲಿ ನಿರ್ಮಲಾ ಸೀತಾರಾಮನ್ ಅವರು ಎ1 ಆರೋಪಿಯಾಗಿದ್ದು, ಇಡಿ ಅಧಿಕಾರಿಗಳು ಎ2,…
ಬೆಂಗಳೂರು, ಸೆ.28 : ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಆದೇಶದ ಮೇರೆಗೆ ಮೈಸೂರು ಲೋಕಾಯುಕ್ತದಲ್ಲಿ ಸಿಎಂ ಸಿದ್ದರಾಮಯ್ಯಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಲೋಕಾಯುಕ್ತ ಎಡಿಜಿಪಿ ಮನೀಶ್ ಖರ್ಬೀಕರ್ ಸೂಚನೆ ಮೇರೆಗೆ ಮೈಸೂರು ಲೋಕಾಯುಕ್ತ ಎಸ್ ಪಿ ಉದೇಶ್ ನೇತೃತ್ವದಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ. ಸಿಆರ್ಪಿಸಿ ಅಡಿಯಲ್ಲಿ ಎಫ್ಐಆರ್ ದಾಖಲಿಸಿ ಎಂದು ಕೋರ್ಟ್ ಆದೇಶ ಕೂಡಾ ನೀಡಿತ್ತು. ಅದೇ ಕಾಯ್ದೆಯಡಿ ಇದೀಗ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ನ್ಯಾಯಾಲಯ ಸೂಚಿಸಿರುವ ಐಪಿಸಿ ಸೆಕ್ಷನ್ ಭ್ರಷ್ಟಾಚಾರ ತಡೆ ಕಾಯ್ದೆ, ಬೇನಾಮಿ ಆಸ್ತಿ ವಹಿವಾಟು ಕಾಯ್ದೆ, ಭೂ ಕಬಳಿಕೆ ನಿರ್ಬಂಧ ಕಾಯ್ದೆಯಡಿ ಲೋಕಾಯುಕ್ತ ಎಫ್ಐಆರ್ ದಾಖಲಿಸಿದೆ. ಸಿಎಂ ಸಿದ್ದರಾಮಯ್ಯ A 1 ಆರೋಪಿಯಾಗಿದ್ದರೆ, ಪತ್ನಿ ಪಾರ್ವತಿ A 2 ಆರೋಪಿಯಾಗಿದ್ದಾರೆ. ಇನ್ನು ಮಲ್ಲಿಕಾರ್ಜುನ A 3, ದೇವರಾಜು ಎ4 ಹಾಗೂ ಎ5 ಇತರರು ಎಂದು ಎಫ್ಐಆರ್ ನಲ್ಲಿ ದಾಖಲಾಗಿದೆ.
ಮಂಗಳೂರು, ಸೆ.27: ಲಕ್ಷ್ಮಿ ಮೆಮೋರಿಯಲ್ ಕಾಲೇಜ್ ಆಫ್ ಪಿಸಿಯೋಥೆರಪಿ ಇದರ ವತಿಯಿಂದ ನಗರದ ಎ.ಜೆ. ಆಸ್ಪತ್ರೆ ಯಲ್ಲಿ ಎರಡು ದಿನಗಳ ರಾಷ್ಟ್ರೀಯ ಪಿಸಿಯೋಥೆರಪಿ ಕಾನ್ಫರೆನ್ಸ್ ಕಾನ್ಫ್ಲುಯೆನ್ಸ್-2024ನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದ ತೆಲಂಗಾಣ ಕೈಗಾರಿಕಾ ಹಾಗೂ ವಾಣಿಜ್ಯ ಸಚಿವ ಡಿ.ಶ್ರೀಧರ್ ಬಾಬು ಅವರು,ಪಿಸಿಯೋಥೆರಪಿ ಚಿಕಿತ್ಸೆಗೆ ತಂತ್ರಜ್ಞಾನದ ಗಮನಾರ್ಹ ಕೊಡುಗೆ ನೀಡಿದೆ. ಎ.ಜೆ. ಶೆಟ್ಟಿ ಸ್ಥಾಪಿಸಿದ ಈ ಪಿಸಿಯೋಥೆರಪಿ ಕೇಂದ್ರವು 30 ವರ್ಷಗಳ ಸಾರ್ಥಕ ಸೇವೆಯನ್ನು ಸಮಾಜಕ್ಕೆ ನೀಡುತ್ತಾ ಬಂದಿವೆ. ಆರೋಗ್ಯ ಕ್ಷೇತ್ರದಲ್ಲಿ ಎಜೆ ಆಸ್ಪತ್ರೆಯು ಮಹತ್ತರವಾದ ಸಾಧನೆಯನ್ನು ಮಾಡಲಿ ಎಂದು ಅವರು ಹೇಳಿದರು. ಆಧುನಿಕ ತಂತ್ರಜ್ಞಾನವು ವೈದ್ಯಕೀಯ ಕ್ಷೇತ್ರದಲ್ಲಿ ಪ್ರಾಮುಖ್ಯತೆ ಪಡೆದಿದೆ. ಈಗ ರೋಬೋಟಿಕ್ ಡಿವೈಸ್ಗಳಿವೆ. ತಂತ್ರಜ್ಞಾನ ಬಹಳಷ್ಟು ಮುಂದುವರಿದಿದೆ. ಹೊಸ ತಂತ್ರಜ್ಞಾನದ ಬಳಕೆಯಿಂದ ಪಿಸಿಯೋಥೆರಪಿ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ಸಾಧ್ಯ ಎಂದು ಸಚಿವ ಡಿ.ಶ್ರೀಧರ್ ಬಾಬು ಹೇಳಿದರು. ಕಮಿಷನ್ ಫಾರ್ ಅಲೈಡ್ ಆ್ಯಂಡ್ ಹೆಲ್ತ್ ಕೇರ್ ಕರ್ನಾಟಕ ಇದರ ಅಧ್ಯಕ್ಷ ಡಾ. ಯು.ಟಿ. ಇಪ್ಲಿಕಾ ಫರೀದ್ ಮಾತನಾಡಿ, ಪಿಸಿಯೋಥೆರಪಿ ರಾಷ್ಟ್ರೀಯ…
ಮೂಡುಬಿದಿರೆ, ಸೆ. 26 : ಪರೀಕ್ಷೆ ಮುಗಿಸಿ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿಗೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ನಡೆದಿದೆ.ಮೂಡುಬಿದಿರೆ ಜೈನ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಆದಿತ್ಯ ಮೃತಪಟ್ಟ ವಿದ್ಯಾರ್ಥಿ. ಪಡುಮಾರ್ನಾಡು ಗ್ರಾಪಂ ವ್ಯಾಪ್ತಿಯ ಅಚ್ಚರಕಟ್ಟೆ ನಿವಾಸಿ ರವಿ ಅವರ ಪುತ್ರ,ಆದಿತ್ಯ ಬನ್ನಡ್ಕದಲ್ಲಿ ಬಸ್ಸಿನಿಂದಿಳಿದು ರಸ್ತೆ ದಾಟುವ ಸಂದರ್ಭದಲ್ಲಿ ವೇಗವಾಗಿ ಬರುತ್ತಿದ್ದ ಕಾರು ಢಿಕ್ಕಿ ಹೊಡೆದಿದ್ದು, ಢಿಕ್ಕಿ ಹೊಡೆದ ರಭಸಕ್ಕೆ ಹೆದ್ದಾರಿಯಿಂದ ಚರಂಡಿಗೆ ಎಸೆಯಲ್ಪಟ್ಟಿದ್ದು, ಆದಿತ್ಯ ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಧಿಕ ರಕ್ತಸ್ರಾವವಾಗಿ ವಿದ್ಯಾರ್ಥಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.