Subscribe to Updates
Get the latest creative news from FooBar about art, design and business.
Author: admin
ಪುತ್ತೂರು, ಜು. 24 : ಬೈಕ್ ಸ್ಕಿಡ್ ಆಗಿ ಬಿದ್ದು ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಉಪ್ಪಿನಂಗಡಿ – ಪುತ್ತೂರು ರಸ್ತೆಯ ಕೆಮ್ಮಾಯಿ ಬಳಿ ರವಿವಾರ ನಡೆದಿದೆ. ಸೇಡಿಯಾಪು ನಿವಾಸಿ ಚೈತ್ರೇಶ್ ಎಸ್. ಯಾನೆ ಚರಣ್ (20) ಮೃತ ಬೈಕ್ ಸವಾರ. ಚರಣ್ ಅವರು ಪುತ್ತೂರಿನಿಂದ ಸೇಡಿಯಾಪು ಕಡೆ ಬೈಕ್ ಚಲಾಯಿಸಿ ಹೋಗುತ್ತಿದ್ದಾಗ ಕೆಮ್ಮಾಯಿ ಎಂಬಲ್ಲಿ ಬೈಕ್ ಸ್ಕಿಡ್ ಆಗಿ ಬಿದ್ದಿದೆ. ಇದರಿಂದಾಗಿ ಸವಾರ ಚರಣ್ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಪುತ್ತೂರು ಸಂಚಾರ ಠಾಣಾ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಬಾಂಗ್ಲಾದೇಶ, ಜು. 23: ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಬಸ್ ಕೆರೆಗೆ ಬಿದ್ದು 17 ಮಂದಿ ಮೃತಪಟ್ಟಿರುವ ಘಟನೆ ಬಾಂಗ್ಲಾದೇಶದ ಝಲ್ಕಾತಿ ಜಿಲ್ಲೆಯಲ್ಲಿ ಸಂಭವಿಸಿದೆ. ಈ ಬಸ್ 60ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತು ಭಂಡಾರಿಯಾ ಉಪ ಜಿಲ್ಲೆಯಿಂದ ನೈಋತ್ಯ ವಿಭಾಗೀಯ ಪ್ರಧಾನ ಕಚೇರಿ ಬರಿಸಾಲ್ಗೆ ಎಂಬಲ್ಲಿಗೆ ಹೋಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ನೀರಿಗೆ ಬಿದ್ದು 17 ಮಂದಿ ಮೃತಪಟ್ಟಿದ್ದಾರೆ. ಈಗಾಗಲೇ 17 ಶವ ಹೊರ ತೆಗೆಯಲಾಗಿದೆ. ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ. ಈ ಘಟನೆಯಲ್ಲಿ 35ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಬಂಟ್ವಾಳ, ಜು. 22: ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಮನೆಯ ಮಹಡಿ ಮೇಲೆ ಬಿದ್ದ ಘಟನೆ ವಗ್ಗ ಸಮೀಪದ ಬಾಂಬಿಲ ಎಂಬಲ್ಲಿ ನಡೆದಿದೆ. ಲಾರಿಚಾಲಕ ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾನೆ. ಬಾಂಬಿಲ ಆಶ್ಬಕ್ ಎಂಬವರ ಮನೆಯ ಮಹಡಿಗೆ ಲಾರಿ ಬಿದ್ದ ಪರಿಣಾಮ ಮನೆಗೆ ಹಾನಿಯಾಗಿದೆ.ಮಂಗಳೂರಿನಿಂದ ಬೆಳ್ತಂಗಡಿ ಕಡೆಗೆ ಹೋಗುತ್ತಿದ್ದ ಲಾರಿ ಮಧ್ಯ ರಾತ್ರಿ ಬಾಂಬಿಲ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮನೆಯ ಮಹಡಿ ಮೇಲೆ ಬಿದ್ದಿದೆ ಎನ್ನಲಾಗಿದೆ.
ಮಂಗಳೂರು, ಜು. 21: ನೀರು ತುಂಬಿದ್ದ ಬಕೆಟ್ ಗೆ ಬಿದ್ದು ಒಂದು ವರ್ಷ ಎಂಟು ತಿಂಗಳ ಮಗು ಮೃತಪಟ್ಟಿರುವ ಘಟನೆ ಕಾವೂರಿನಲ್ಲಿ ನಡೆದಿದೆ. ಕಾವೂರು ಮಸೀದಿ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಫಿರೋಝ್ ಅನ್ಸಾರಿ ಎಂಬವರ ಪುತ್ರಿ ಆಯಿಶ ಮೃತಪಟ್ಟಿರುವ ಮಗು ಎಂದು ಹೇಳಲಾಗಿದೆ. ಬುಧವಾರ ಸಂಜೆ ಮಗು ಮನೆಯಲ್ಲಿ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ನೀರು ತುಂಬಿದ್ದ ಬಕೆಟ್ ಗೆ ಬಿದ್ದು ಮೃತಪಟ್ಟಿದೆ ಎನ್ನಲಾಗಿದೆ. ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು, ಜು. 20 : ರಸ್ತೆ ವಿಭಜಕಕ್ಕೆ ಬೈಕ್ ಢಿಕ್ಕಿ ಹೊಡೆದು ಇಂಜಿನಿಯರಿಂಗ್ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ಬುಧವಾರ ಮಂಗಳೂರಿನಲ್ಲಿ ಸಂಭವಿಸಿದೆ. ಮೃತ ಯುವಕನನ್ನು ವಿದ್ಯಾರ್ಥಿ ಮಹಮ್ಮದ್ ನಶತ್(21) ಎಂದು ಗುರುತಿಸಲಾಗಿದೆ. ಮಹಮ್ಮದ್ ನಶತ್ ಮೂಲತಃ ಉಪ್ಪಳದವರಾಗಿದ್ದು,ಪಡೀಲ್ ಕಡೆಯಿಂದ ವಳಚ್ಚಿಲ್ ಕಾಲೇಜು ಕಡೆಗೆ ಬೈಕಿನಲ್ಲಿ ತೆರಳುತ್ತಿದ್ದಾಗ, ಬೈಕ್ ಸ್ಕಿಡ್ ಆಗಿ ಡಿವೈಡರ್ ಗೆ ಬಡಿದು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾನೆ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಉಡುಪಿ, ಜು. 13: ಉಡುಪಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ವಿದ್ಯಾಕುಮಾರಿ ಕೆ. ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಹಿಂದೆ ಇದ್ದ ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಅವರು ವರ್ಗವಣೆಯಾಗಿದ್ದಾರೆ. ವಿದ್ಯಾಕುಮಾರಿ ಕೆ. ಅವರು ಈ ಹಿಂದೆ ಉಡುಪಿ ಜಿಲ್ಲೆಯ ಎಡಿಸಿಯಾಗಿ ಸೇವೆ ಸಲ್ಲಿಸಿದ್ದಾರೆ.
ನವದೆಹಲಿ,ಜು. 11: ದೆಹಲಿ – ಮೀರತ್ ಎಕ್ಸ್‌ಪ್ರೆಸ್ ವೇಯಲ್ಲಿ ಶಾಲಾ ಬಸ್ ಮತ್ತು ಕಾರು ನಡುವೆ ಅಪಘಾತ ಸಂಭವಿಸಿ 6 ಮಂದಿ ಮೃತಪಟ್ಟಿರುವ ಘಟನೆ ಗಾಜಿಯಾಬಾದ್ ನಲ್ಲಿ ಮಂಗಳವಾರ ನಡೆದಿದೆ. ಈ ಅಪಘಾತದಲ್ಲಿ ಕಾರಿನಲ್ಲಿದ್ದ ಒಂದೇ ಕುಟುಂಬದ 6 ಸದಸ್ಯರು ಸಾವನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಸ್ನಲ್ಲಿ ಯಾವುದೇ ವಿದ್ಯಾರ್ಥಿಗಳು ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಬಸ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳ್ತಂಗಡಿ,ಜು. 10 : ದ್ವಿಚಕ್ರ ವಾಹನಕ್ಕೆ ಪಿಕಪ್ ಡಿಕ್ಕಿ ಹೊಡೆದು ಸ್ಥಳದಲ್ಲೇ ದ್ವಿಚಕ್ರ ಸವಾರ ಸಾವನ್ನಪ್ಪಿದ ಘಟನೆ ಕುಪ್ಪೆಟ್ಟಿಯಲ್ಲಿ ನಡೆದಿದೆ. ಮೃತರನ್ನು ಶುಂಠಿಪಲಿಕೆ ನಿವಾಸಿ ಅಬೂಬಕರ್ ಎಂದು ಗುರುತಿಸಲಾಗಿದೆ.ಬೆಳ್ತಂಗಡಿ ಊರುವಲು ಗ್ರಾಮದ ಕುಪ್ಪೆಟ್ಟಿ ರಸ್ತೆ ಮಜ್ಜೆ ಎಂಬಲ್ಲಿ ಈ ಅಪಘಾತ ನಡೆದಿದೆ. ಅಪಘಾತದಲ್ಲಿ ಮೃತರ ಪತ್ನಿ ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪುತ್ತೂರು ಸಂಚಾರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಸರಗೋಡು, ಜು. 09 : ಆಟೊ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದುಆಟೋ ಚಾಲಕ ಸಾವನಪ್ಪಿದ ಘಟನೆ ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಪೆರ್ಮುದೆ ಬಳಿ ನಡೆದಿದೆ. ಮೃತರನ್ನು ಚೇವಾರ್ ಮಿತ್ತಡ್ಕದ ಕಿಶೋರ್ ಯಾನೆ ಪ್ರಕಾಶ್ ಸಿ. ಎಚ್ (34) ಎಂದು ಗುರುತಿಸಲಾಗಿದೆ. ಚೇವಾರ್ ನಲ್ಲಿ ಕಿಶೋರ್ ಆಟೋರಿಕ್ಷಾ ಬಾಡಿಗೆ ನಡೆಸುತ್ತಿದ್ದು, ರವಿವಾರ ಬಾಡಿಗೆಗೆ ತೆರಳಿ ಮರಳುತ್ತಿದ್ದಾಗ ರಸ್ತೆ ಬದಿ ಇಡಲಾಗಿದ್ದ ಇಂಟರ್ ಲಾಕ್ ಗೆ ಬಡಿದು ರಿಕ್ಷಾ ಮಗುಚಿ ಬಿದ್ದಿದೆ. ರಿಕ್ಷಾದಡಿ ಸಿಲುಕಿದ್ದ ಕಿಶೋರ್ ನನ್ನು ನಾಗರಿಕರು ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ.
ಮಂಗಳೂರು ಜು. 08 : ಚಿಕ್ಕಬಳ್ಳಾಪುರದ ಉಪವಿಭಾಗಾಧಿಕಾರಿಯಾಗಿದ್ದ ಡಾ.ಜಿ.ಸಂತೋಷ್ ಕುಮಾರ್ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಅಪರ ಜಿಲ್ಲಾಧಿಕಾರಿ ಮತ್ತು ಅಪರ ದಂಡಾಧಿಕಾರಿ ಹುದ್ದೆಗೆ ನಿಯುಕ್ತಿಗೊಳಿಸಿ ಸರಕಾರ ಶುಕ್ರವಾರ ಆದೇಶ ನೀಡಿದೆ. ದಕ್ಷಿಣ ಕನ್ನಡ ಜಿಲ್ಲಾ ಅಪರ ಜಿಲ್ಲಾಧಿಕಾರಿಯಾಗಿದ್ದ ಎಚ್.ಕೃಷ್ಣಮೂರ್ತಿ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಹುದ್ದೆ ಖಾಲಿಯಾಗಿತ್ತು. ಹೀಗಾಗಿ ಡಾ. ಸಂತೋಷ ಕುಮಾರ್ ಅವರನ್ನು ಖಾಲಿ ಇದ್ದ ಹುದ್ದೆಗೆ ನೇಮಕ ಮಾಡಲಾಗಿದೆ.